ಬಿಜೆಪಿಯವರು ಸರ್ವೆ ಮಾಡಿಸಿರುವ ಪ್ರಕಾರ ಅವರಿಗೆ ಚುನಾವಣೆಯಲ್ಲಿ 200 ಸ್ಥಾನ ಮಾತ್ರ ಬರುತ್ತದೆ : ಸಿಎಂ ಸಿದ್ದರಾಮಯ್ಯ
"ಕರ್ನಾಟಕದಲ್ಲಿ ಸೋಲುವ ಹತಾಶೆಯಿಂದ ಬಿಜೆಪಿ 28 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ "
ಮೈಸೂರು: ಬಿಜೆಪಿಯವರು ಸರ್ವೆ ಮಾಡಿಸಿರುವ ಪ್ರಕಾರ ಅವರಿಗೆ 200 ಸ್ಥಾನ ಮಾತ್ರ ಬರುತ್ತದೆ. ಹಾಗಾಗಿ ಅವರು 400 ಸೀಟು ಗೆಲ್ಲುತ್ತೇವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದಿನಿಂದ ಮೂರು ದಿನಗಳ ವರಗೆ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಅವರು ಸೋಮವಾರ ಮಂಡಕಳ್ಳಿ ವಿಮಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
"ಮೋದಿ ಅವರು ಅಭಿವೃದ್ಧಿ ಮಾಡಿದ್ದರೆ ತಾನೆ ಟ್ರೇಲರ್ ಬಿಡೋದು, ಅವರ ಅಭಿವೃದ್ಧಿ ಶೂನ್ಯ, ಇನ್ನು ಟ್ರೇಲರ್ ಹೇಗೆ ಬಿಡುತ್ತಾರೆ. ಇದುವರಗೆ ಅವರು ಸುಳ್ಳಿನ ಕನಸುಗಳನ್ನು ಬಿತ್ತಿದ್ದಾರೆ. ಅವರ ಸುಳ್ಳಿನ ಪಿಚ್ಕರ್ ಬಾಕಿ ಇದೆ" ಎಂದು ಹೇಳಿದರು.
"ಬಿಜೆಪಿಯವರು ಸರ್ವೆ ಮಾಡಿಸಿರುವ ಪ್ರಕಾರ ಅವರಿಗೆ 200 ಸ್ಥಾನ ಮಾತ್ರ ಬರುತ್ತದೆ. ಹಾಗಾಗಿ ಅವರು 400 ಸೀಟು ಗೆಲ್ಲುತ್ತೇವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇವರು ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಜನರು ಬಹಳ ಪ್ರಭುದ್ಧರಿದ್ದಾರೆ. ಜನರನ್ನು ಮೂರ್ಖರನ್ನಾಗಿ ಮಾಡುತ್ತೇವೆ ಎಂದುಕೊಂಡಿದ್ದರೆ ಅವರೇ ಮೂರ್ಖರಾಗುತ್ತಾರೆ" ಎಂದು ಎಂದರು.
"ಕರ್ನಾಟಕದಲ್ಲಿ ಸೋಲುವ ಹತಾಶೆಯಿಂದ 28 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಇಂಡಿಯಾ ಒಕ್ಕೂಟ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಎಷ್ಟು ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಯತೀಂದ್ರ ಸಿದ್ಧರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಗೌರವ, ಅವಮಾನ ಮಾಡಬೇಕು ಎಂದು ಹೇಳಿಕೆ ನೀಡಿಲ್ಲ. ಯತೀಂದ್ರ ಅವರು ಸಿಬಿಐನವರು ಕೊಟ್ಟಿರುವ ವರದಿ ಆಧಾರದ ಮೇಲೆ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಸಿಬಿಐನವರು ನೀಡಿರುವ ವರದಿ ಸುಳ್ಳಾ?. ಬಿಜೆಪಿಯವರಿಗೆ ಸಂಸ್ಕಾರ ಇಲ್ಲ. ಅವರು ಏನು ನಮಗೆ ಸಂಸ್ಕಾರದ ಪಾಠ ಹೇಳುವುದು" ಎಂದು ಪ್ರಶ್ನಿಸಿದರು
ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸಂಪರ್ಕ ಮಾಡಿಲ್ಲ:
ನಾನು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿಲ್ಲ. ದೂರವಾಣಿ ಮೂಲಕವೂ ಮಾತನಾಡಿಲ್ಲ. ಈಗಾಗಲೇ ನಮ್ಮ ಸಚಿವರುಗಳಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಭೇಟಿಯಾಗಿ ಮಾತನಾಡಿ ಬಂದಿದ್ದಾರೆ. ಅವರೊಂದಿಗೆ ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರನ್ನೇ ಕೇಳಬೇಕು. ನಾನಂತೂ ಅವರನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ
ಕಾಂಗ್ರೆಸ್ ಪಕ್ಷಕ್ಕೆ ಇತರೆ ಪಕ್ಷಗಳಿಂದ ಜನರು ಬರುವ ಸಾಧ್ಯತೆಯಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನರು ಸೇರ್ಪಡೆಯಾಗಲು ಉತ್ಸುಕರಿದ್ದಾರೆ. ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷದಲ್ಲಿ ಸ್ವಾಗತವಿದೆ ಎಂದರು.
ನಮ್ಮ ಸಾಧನೆಗಳು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ಖಾತ್ರಿಪಡಿಸಿದೆ
ರಾಜ್ಯದಲ್ಲಿ ಪ್ರಧಾನಿ ಮೋದಿಯವರು ರ್ಯಾಲಿ ಪ್ರಾರಂಭಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ಧರಾಮಯ್ಯ, ಮೋದಿಯವರು ರಾಜ್ಯಕ್ಕೆ ಬಂದು ಪ್ರಚಾರ ಮಾಡಿದರೆ ಅಭ್ಯಂತರ ಏನುಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಮೋದಿಯವರು ಪ್ರಚಾರ ಕೈಗೊಂಡಿದ್ದರು. ನಂಜನಗೂಡಿನಲ್ಲಿ ರೋಡ್ ಶೋ ಮಾಡಿದ್ದರು. ಬಿಜೆಪಿ ಗೆಲ್ಲಲು ಸಾಧ್ಯವಾಯಿತೇ?. ಕೇಂದ್ರದಲ್ಲಿ ಮೋದಿ ಸರಕಾರದ ವೈಫಲ್ಯಗಳು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಜೊತಗೆ ನಮ್ಮ ಸಾಧನೆಗಳು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವನ್ನು ಖಾತ್ರಿಪಡಿಸಿದೆ ಎಂದರು.
ಸತ್ಯ ಹೇಳಿದರೆ ಅವರ ದೃಷ್ಟಿಯಲ್ಲಿ ಗರ್ವ:
ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗಳ ಗರ್ವಭಂಗವಾಗಬೇಕೆಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ, ನನಗೆ ಯಾವ ಗರ್ವವೂ ಇಲ್ಲ.ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದು ನಿಜ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಅದನ್ನು ಹೇಳಿದರೆ ತಪ್ಪೇ? ಎಂದು ಪ್ರಶ್ನಿಸಿದರು.
ತಮಗೆ ಮೋದಿಯವರೊಂದಿಗೆ ಅವಿನಾಭಾವ ಸಂಬಂಧವಿದೆ ಎಂದು ದೇವೇಗೌಡರು ಹೇಳಿದ್ದಾರೆ. ಹಾಗಾದರೆ ಮೇಕೆದಾಟು ಅಣೆಕಟ್ಟು ಮಾಡಿಸಲಿ. ಸುಳ್ಳು ಯಾಕೆ ಹೇಳುತ್ತಾರೆ. ಸತ್ಯ ಹೇಳಿದರೆ ಅವರ ದೃಷ್ಟಿಯಲ್ಲಿ ಗರ್ವ. ಸುಳ್ಳು ಹೇಳಿದವರು ಅವರು. ನಾನು ಸತ್ಯ ಹೇಳಿದರೆ ಗರ್ವ ಎನ್ನುತ್ತಾರೆ. ಇದಕ್ಕೆ ಏನು ಮಾಡುವುದು ಎಂದರು.