ಸಿಎಂ ಸಿದ್ದರಾಮಯ್ಯರ ಅವಹೇಳನ ಆರೋಪ: ಸಂಸದ ಪ್ರತಾಪ ಸಿಂಹ ವಿರುದ್ಧ FIR ದಾಖಲು
Photo: facebook/MPPratapSimha
ಮೈಸೂರು, ಡಿ.27: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಸಂಸದ ಪ್ರತಾಪ ಸಿಂಹ ವಿರುದ್ಧ ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯಕುಮಾರ್ ನೀಡಿರುವ ದೂರನ್ನು ಆಧರಿಸಿ ಭಾರತೀಯ ದಂಡ ಸಂಹಿತೆ 504 (ಉದ್ದೇಶಪೂರ್ವಕವಾಗಿ ನಿಂದಿಸಿ ಶಾಂತಿಭಂಗ ಉಂಟು ಮಾಡುವುದು), 153 (ಕೋಮುಗಳ ನಡುವೆ ದ್ವೇಷ ಹುಟ್ಟಿಸುವುದು) ಅಡಿ ಪ್ರತಾಪ ಸಿಂಹ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.
‘ಹುಣಸೂರಿನಲ್ಲಿ ಮಂಗಳವಾರ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಪ್ರತಾಪ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ‘ಸೋಮಾರಿ ಸಿದ್ಧ’ ಎಂದು ಏಕವಚನದಲ್ಲಿ ಸಂಬೋಧಿಸಿದ್ದಲ್ಲದೆ, ಜಾತಿ ಜಾತಿಗಳ ನಡುವೆ ದ್ವೇಷ ಹರಡಿಸುವ ಕೆಲಸ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆ. ಪ್ರತಾಪ ಸಿಂಹ, ಹಿಂದೂ-ಮುಸ್ಲಿಮ್ ಸಮುದಾಯದ ನಡುವೆ ಕೋಮು ಗಲಭೆ ಸೃಷ್ಟಿಸಲು ನಿರಂತರ ಪ್ರಯತ್ನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ವಹಿಸಬೇಕು’ ಎಂದು ವಿಜಯಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.