ಶಾಸಕ ಮುನಿರತ್ನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿ ಬಂಧಿಸಲು ಎಂ.ಲಕ್ಷ್ಮಣ್ ಆಗ್ರಹ
ಮೈಸೂರು, ಸೆ.14: ಗುತ್ತಿಗೆದಾರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಒಕ್ಕಲಿಗ, ದಲಿತ ಸಮುದಾಯದ ಬಗ್ಗೆ ಅವಾಚ್ಯವಾಗಿ ನಿಂದಿಸಿರುವ ಬೆಂಗಳೂರಿನ ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಬೇಕು, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಕೂಡಲೇ ಬಂಧಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಘನತ್ಯಾಜ್ಯ ನಿರ್ವಹಣೆಗೆ ಗಂಗಾ ಎಂಟರ್ ಪ್ರೈಸಸ್ ಗೆ ಗುತ್ತಿಗೆ ನೀಡಲಾಗಿತ್ತು. ಮೂವತ್ತು ಲಕ್ಷ ರೂ.ನ ಟೆಂಡರ್ ಗೆ 15 ಲಕ್ಷ ರೂ. ಕಮಿಷನ್ ಕೇಳಿದ್ದಾರೆ. ಈ ವೇಳೆ ಆ ವ್ಯಕ್ತಿಗೆ ಶಾಸಕ ಮುನಿರತ್ನ ಕೆಟ್ಟ ಪದಗಳನ್ನ ಬಳಸಿ ಬೈದಿದ್ದಾರೆ. ಈಗಾಗಲೇ ಆ ಆಡಿಯೋ ಎಲ್ಲಾ ಕಡೆ ವೈರಲ್ ಆಗಿದೆ ಎಂದರು.
ಶಾಸಕ ಮುನಿರತ್ನ ಸೇರಿದಂತೆ ಬಿಜೆಪಿಯಲ್ಲಿರುವ ಬಹುತೇಕರ ಮನಸ್ಥಿತಿ ಇದೇ ರೀತಿ ಇದೆ. ಶಾಸಕ ಮುನಿರತ್ನ ಗುತ್ತಿಗೆದಾರ ಚಲುವರಾಜ್ ಅವರನ್ನು ತನ್ನ ಮನೆಗೆ ಕರೆಸಿಕೊಂಡು ಒಕ್ಕಲಿಗ ಮತ್ತು ದಲಿತ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಒಕ್ಕಲಿಗ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆದಿದ್ದಾನೆ. ಸೋ ಕಾಲ್ಡ್ ಬಿಜೆಪಿ-ಜೆಡಿಎಸ್ ನ ಒಕ್ಕಲಿಗ ನಾಯಕರು ಯಾಕೆ ಮಾತನಾಡುತ್ತಿಲ್ಲ, ಎಚ್.ಡಿ.ಕುಮಾರಸ್ವಾಮಿಯವರೇ, ಈ ವಿಚಾರದ ಬಗ್ಗೆ ಯಾಕೆ ನೀವು ಮಾತನಾಡುತ್ತಿಲ್ಲ? ಬಿಜೆಪಿಯವರು ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಎಂದು ಸುಮ್ಮನಾಗಿದ್ದೀರ ಎಂದು ಪ್ರಶ್ನಿಸಿದರು.
ಮುನಿರತ್ನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು. ಮುಂದಿನ ದಿನಗಳಲ್ಲಿ ಅಹಿತಕರ ಘಟನೆ ನಡೆದರೆ ಪೊಲೀಸ್ ನವರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
ಶಾಸಕ ಮುನಿರತ್ನ ನನ್ನ ಬಿಜೆಪಿಯಿಂದ ಉಚ್ಚಾಟಿಸಬೇಕು. ಬಿಜೆಪಿ ಸದಸ್ಯತ್ವ ಹಿಂಪಡೆಯಬೇಕು. ಶಾಸಕ ಮುನಿರತ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಈತನ ಶಾಸಕ ಸ್ಥಾನ ವಜಾಗೊಳಿಸುವಂತೆ ಸ್ಪೀಕರ್ ಅವರಿಗೂ ದೂರು ಕೊಡುತ್ತೇವೆ. ಈತನ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಸಚಿವರನ್ನ ಕೂಡ ಆಗ್ರಹ ಮಾಡುತ್ತೇವೆ ಎಂದು ಹೇಳಿದರು.
ಶಾಸಕ ಮುನಿರತ್ನನನ್ನು ಬಂಧಿಸುವಂತೆ ಆಗ್ರಹಿಸಿ ಪಕ್ಷಾತೀತವಾಗಿ ಸೆ.16ರಂದು ಪೂರ್ವಾಹ್ನ 11.30ಕ್ಕೆ ನಗರದ ಗಾಂಧಿ ವೃತ್ತದಲ್ಲಿ ಧರಣಿ ಮಾಡುತ್ತೇವೆ. ಸ್ವಾಭಿಮಾನಿ ಒಕ್ಕಲಿಗರು, ದಲಿತರು ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಣ್ಣ, ಈಶ್ವರ್ ಚಕ್ಕಡಿ, ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.