ಶೀಘ್ರದಲ್ಲೇ ಜಾತಿಗಣತಿ ವರದಿ ಪ್ರಕಟ : ಗೃಹ ಸಚಿವ ಡಾ.ಜಿ.ಪರಮೇಶ್ವರ್
ಡಾ.ಜಿ.ಪರಮೇಶ್ವರ್
ಮೈಸೂರು : ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿರುವ ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲೇ ಪ್ರಕಟ ಮಾಡಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರ ಕಾಂಗ್ರೆಸ್ ಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಬಂದಿದ್ದರಿಂದ ವರದಿ ಪ್ರಕಟ ಮುಂದಕ್ಕೆ ಹೋಗಿದೆ. ವರದಿ ಪ್ರಕಟಕ್ಕೆ ಸಿದ್ದರಾಮಯ್ಯ ಅವರು ಒಲವು ತೋರಿದ್ದಾರೆ ಎಂದರು.
ಜಾತಿಗಣತಿ ಜಾರಿಯಾಗಬೇಕಾ? ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾವ ಸಮುದಾಯ ಹೆಚ್ಚಿದೆ, ಯಾವ ಸಮುದಾಯ ಕಡಿಮೆ ಇದೆ ಎನ್ನುವ ಮಾಹಿತಿ ಸರಕಾರ ನಡೆಸುವಾಗ ಬೇಕಾ ಬೇಡ್ವಾ? ಎಂದು ಪ್ರಶ್ನಿಸಿದರು.
ರಾಷ್ಟ್ರದಲ್ಲಿಯೇ ರಾಹುಲ್ ಗಾಂಧಿಯವರು ಜಾತಿಗಣತಿ ಜಾರಿ ಬಗ್ಗೆ ಮಾತಾಡಿದ್ದಾರೆ. ಕೇಂದ್ರದಲ್ಲಿ ನಮ್ಮ ಸರಕಾರ ಬಂದರೆ ಜಾರಿಗೆ ತರುವುದಾಗಿಯೂ ಹೇಳಿದ್ದಾರೆ. ಅನುಷ್ಠಾನದ ವೇಳೆ ಬಿಜೆಪಿ ಮತ್ತು ವಿಪಕ್ಷ ನಾಯಕರ ಟೀಕೆಗಳಿಗೆ ತಕ್ಕ ಉತ್ತರ ನೀಡುತ್ತೇವೆ ಎಂದರು.
ಸಿದ್ದರಾಮಯ್ಯ ಆಡಳಿತ ಮೈಲಿಗಲ್ಲು:
2013 ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಆಡಳಿತ ಮೈಲಿಗಲ್ಲು. ಅವತ್ತಿನ ಕಾರ್ಯಕ್ರಮಗಳನ್ನು ಜನರು ಇವತ್ತಿಗೂ ನೆನಪು ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
2023ರ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆ ಸಿದ್ಧಪಡಿಸುವಾಗ ಐದು ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಆರ್ಥಿಕ ತಜ್ಞರಾಗಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಸೇರಿಸಿದರು. ಯಾವುದೇ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ಯೋಜನೆ ಮಾಡಿದ್ದಾರೆ ಎಂದು ತಿಳಿಸಿದರು.
ಮುಸ್ಲಿಂರ ಮೇಲೆ ಯಾಕೆ ದ್ವೇಷ :
ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಓಲೈಕೆ ಮಾಡುತ್ತಿದೆ ಎಂದು ಬಿಜೆಪಿ, ಜೆಡಿಎಸ್ ನಾಯಕರು ಟೀಕಿಸುತ್ತಾರೆ. ಈ ದೇಶದಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲೇ ಸಾಯುವ ಅವರ ಮೇಲೆ ಯಾಕೆ ದ್ವೇಷ? ಶೇ.18 ಜನಸಂಖ್ಯೆಯ ಮುಸ್ಲಿಂರನ್ನು ದೇಶದಿಂದ ಹೊರಹಾಕಲು ಸಾಧ್ಯವೇ? ಸಂವಿಧಾನ ಬದ್ಧವಾಗಿ ಅವರಿಗೂ ಬಾಳುವ ಹಕ್ಕಿದೆ. ಕಾನೂನಾತ್ಮಕವಾಗಿ ಅವರ ಪರವಾಗಿದ್ದೇವೆ ಎಂದು ತಿಳಿಸಿದರು.