ಬಿಜೆಪಿ ಜೊತೆ ಮದುವೆಯಾಗಿ ಜೆಡಿಎಸ್ ದಾರಿಯಲ್ಲಿ ನಿಂತಿದೆ : ಸಿ.ಎಂ.ಇಬ್ರಾಹೀಂ ವ್ಯಂಗ್ಯ
ಸಿ.ಎಂ.ಇಬ್ರಾಹೀಂ
ಮೈಸೂರು : ʼಅನೇಕ ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ರಾಜ್ಯದಲ್ಲಿ ಮೂರನೇ ಶಕ್ತಿ ಹುಟ್ಟು ಹಾಕಬೇಕಾಗಿದೆ. ಬಿಜೆಪಿ ಜೊತೆ ಮದುವೆಯಾಗಿ ಜೆಡಿಎಸ್ ದಾರಿಯಲ್ಲಿ ನಿಂತಿದೆʼ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಹೇಳಿದರು.
ಇಂದು(ಸೋಮವಾರ) ಮೈಸೂರಿನಲ್ಲಿ ಶಾಸಕ ಜಿ.ಟಿ ದೇವೇಗೌಡ ಅವರನ್ನು ಸಿಎಂ ಇಬ್ರಾಹಿಂ ಭೇಟಿಯಾಗಿ ಅವರಿಗೆ ಹುಟ್ಟುಹಬ್ಬದ ಶುಭಕೋರಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಜೆಡಿಎಸ್ನಿಂದ ಅನೇಕರು ನೋವು ಉಂಡಿದ್ದಾರೆ. ಜೆಡಿಎಸ್, ಕುಮಾರಸ್ವಾಮಿ ಸರಿ ಆಗುತ್ತಾರೆ ಅಂತ ಇದ್ದೆ. ನಾನು ಇದ್ದಾಗ ಕುಮಾರಸ್ವಾಮಿ 20 ಸಾವಿರ ಅಂತರದಲ್ಲಿ ಗೆದ್ದಿದ್ದರು. ಈಗ ಕೇಂದ್ರ ಸಚಿವರಾಗಿ ಮಗನನ್ನು ಸೋಲಿಸಿದ್ದಾರೆ. ಈ ಹಿಂದೆ ದೇವೇಗೌಡರು ಇದ್ದಂತಹ ಸಿದ್ಧಾಂತಕ್ಕೆ ಬಂದರೆ ರಾಜ್ಯದ ಜನ ಕುಮಾರಸ್ವಾಮಿ ಅವರನ್ನು ಕ್ಷಮಿಸುತ್ತಾರೆʼ ಎಂದರು.
ʼದೇವೇಗೌಡರಿಗೆ ಈ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು. ಮಕ್ಕಳಿಂದ ಈ ರೀತಿಯಾಗಿದೆ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಈಗ ದೇವೇಗೌಡರಲಿಲ್ಲ. ಒಮ್ಮೆ ರಾಜ್ಯದ ಜನರ ಮುಂದೆ ತಪ್ಪಾಗಿದೆ ಎಂದು ಹೇಳಲಿ. ಜಿ.ಟಿ.ದೇವೇಗೌಡ ಹುಣಸೂರಿನಲ್ಲಿ ಮಗನನ್ನು ಗೆಲ್ಲಿಸಿದ್ದಾರೆ. ಕೋರ್ ಕಮಿಟಿ ಅಧ್ಯಕ್ಷರೂ ಆಗಿದ್ದಾರೆ. ಅವರನ್ನು ಹೇಳದೆ ಕೇಳದೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಮನೆಗೆ ಬೆಂಕಿ ಬಿದ್ದಿದೆ. ರಾಮನಗರದಲ್ಲಿ ಒಕ್ಕಲಿಗರ ವೋಟು ನಿಖಿಲ್ಗೆ ಹೋಗಿಲ್ಲ. 20 ಸಾವಿರ ಇಕ್ಬಾಲ್ ಹುಸೇನ್ಗೆ ಹೋಯ್ತು. ಕಳೆದ ಚುನಾವಣೆಯಲ್ಲಿ ಮುಸ್ಲಿಮರ ವೋಟ್ನಿಂದ ಕುಮಾರಸ್ವಾಮಿ ಗೆದ್ದಿದ್ದುʼ ಎಂದು ಹೇಳಿದರು.