‘ಗ್ಯಾರಂಟಿ’ ಯೋಜನೆಯನ್ನು ಸಿಎಂ ಮರು ಪರಿಶೀಲಿಸಲಿ: ಎಂ.ಲಕ್ಷ್ಮ್ಮಣ್ ಒತ್ತಾಯ
ಮೈಸೂರು: ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮರು ಪರಿಶೀಲನೆ ಮಾಡಬೇಕು. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಅದನ್ನು ಅವರು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಬಿಜೆಪಿ ನಮ್ಮ ಗ್ಯಾರಂಟಿ ವಿರುದ್ಧ ಮಾತಾನಾಡುತ್ತಿತ್ತು. ಆದರೂ ಜನರು ಅವರನ್ನು ಬೆಂಬಲಿಸಿದ್ದಾರೆ. ಹೀಗಾಗಿ ‘ಗ್ಯಾರಂಟಿ’ ನಿಲ್ಲಿಸುವುದೇ ಒಳಿತು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸಿದ್ದರಾಮಯ್ಯನವರ ತವರು ಜಿಲ್ಲೆ. ನನ್ನನ್ನು ಎಷ್ಟು ಬಾರಿ ಸೋಲಿಸಿದರೂ ಬೇಜಾರಿಲ್ಲ. ಆದರೆ ಸಿದ್ದರಾಮಯ್ಯ ಅವರು ಏನು ತಪ್ಪು ಮಾಡಿದ್ದಾರೆ. ತವರು ಜಿಲ್ಲೆಯಲ್ಲೇ ಎಷ್ಟು ಬಾರಿ ಅಪಮಾನ ಮಾಡುತ್ತೀರಿ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು-ಕೊಡಗು ಕ್ಷೇತ್ರದಲ್ಲಿ 6.5 ಲಕ್ಷ ಜನ ಮತ ನೀಡಿದ್ದಾರೆ. 7.9 ಲಕ್ಷ ಜನ ಮತ ನೀಡಿಲ್ಲ. ಇವರಿಗೂ ಧನ್ಯವಾದ ಹೇಳುತ್ತೇನೆ. ಚುನಾವಣೆಯಲ್ಲಿ ಜನರಿಗೆ ಭರವಸೆ ನೀಡಿದ್ದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದೆ. ಈಗ ನಾನು ಎಲ್ಲೂ ಓಡಿ ಹೋಗಲ್ಲ. ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಪ್ರಾಮಾಣಿಕವಾಗಿ ನಿಮ್ಮ ಜೊತೆ ಇದ್ದು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಬಿ.ಎಂ.ರಾಮು, ಶಿವಣ್ಣ, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.