ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ: ಪ್ರಧಾನಿ ಹೇಳಿಕೆಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು
ಮೈಸೂರು : ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ಮು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ ಅಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದರು.
ನಗರದ ರಾಮಕೃಷ್ಣ ನಗರದಲ್ಲಿರುವ ತಮ್ಮನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಯಾರನ್ಮು ಸಮಾಧಿ ಮಾಡಲ್ಲ, ರಾಜಕೀಯವಾಗಿ ಅವರನ್ನು ವಿರೋಧಿಸುತ್ತೇವೆ. ಸೋಲಿನ ಹತಾಶ ಮನೋಭಾವದಿಂದ ವಿರೋಧ ಪಕ್ಷಗಳು ನನ್ನನ್ನು ಸಮಾಧಿಮಾಡಲು ಹೊರಟಿವೆ, ನೀವು ನನ್ಮನ್ನು ಕಾಪಾಡಬೇಕು ಎಂದು ಭಾವನಾತ್ಮಕವಾಗಿ ಜನತೆಯಲ್ಲಿ ಹೇಳಿದ್ದಾರೆ. ಈ ಬಾರಿ ಅವರ ಸುಳ್ಳುಗಳು ನಡೆಯುವುದಿಲ್ಲ ಎಂದು ಹೇಳಿದರು.
ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಗಳಾಗಿ ಬಡವರ ಪರವಾಗಿ ಏನೂ ಮಾಡಿಲ್ಲ ಎನ್ನುವುದು ಹಾಗು ಸುಳ್ಳಿನ ಸರದಾರ ಎನ್ನುವುದು ನಮ್ಮ ಆರೋಪ. ಜನರಿಗೆ ನೀಡಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ರಾಜಕೀಯವಾಗಿ ಅವರನ್ನು ಸೋಲಿಸಬೇಕೆನ್ನುವುದು ವಿರೋಧ ಪಕ್ಷಗಳ ಗುರಿ. ಏಕೆಂದರೆ ಈ ದೇಶ ಆರ್ಥಿಕ ಹಾಗೂ ಬಡವರ ಅಭಿವೃದ್ಧಿ ಆಗಿಲ್ಲ ಎಂದರು.
ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು:
ಪ್ರಧಾನಿಗಳು ಸೋಲುತ್ತೇವೆಂದು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಭಾವನಾತ್ಮಕ ಆಟ ಜನರಿಗೆ ಗೊತ್ತಾಗಿದೆ. ಅವರು ಸುಳ್ಳು ಹೇಳುವುದು, ಭಾವನಾತ್ಮಕವಾಗಿ ಶೋಷಣೆ ಮಾಡುವುದು ಜನರಿಗೆ ಗೊತ್ತಾಗಿದೆ. ಜನರಿಗೆ ಗೊತ್ತಾದ ಮೇಲೆ ಪುನಃ ಅದೇ ತಪ್ಪನ್ನು ಮಾಡುವುದಿಲ್ಲ. ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಸಾಲ ಮನ್ನಾ ಮಾಡಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ಧರಾಮಯ್ಯ, ಹಿಂದೆ ಸಾಲ ಮನ್ನಾ ಮಾಡಿ ಎಂದಾಗ ನಮ್ಮ ಬಳಿ ಪ್ರಿಂಟಿಂಗ್ ಮಶೀನ್ ಇಲ್ಲ ಎಂದಿದ್ದರು. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.