ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ : ಸಿಎಂ ಸಿದ್ದರಾಮಯ್ಯ
ಕರ್ನಾಟಕ ಸಾಂಸ್ಕೃತಿಕ ಮುನ್ನೋಟ : ಚಿಂತನಾ ಸಮಾವೇಶ
ಮೈಸೂರು : ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ವಾತಾವರಣವನ್ನು ಸೃಷ್ಟಿಸಬೇಕು. ಇದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ ರಾಮಯ್ಯ ಸ್ಪಷ್ಟಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮನ್ವಯ- ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಸಂಭ್ರಮ ಕರ್ನಾಟಕ-50 “ಕರ್ನಾಟಕ ಸಾಂಸ್ಕೃತಿಕ ಮುನ್ನೋಟ : ಚಿಂತನಾ ಸಮಾವೇಶ”ವನ್ನು ಶುಕ್ರವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ಕರ್ನಾಟಕದಲ್ಲಿ ಯಾವ ಭಾಷೆಯನ್ನಾದರೂ ಬಳಸಿ ಬದುಕಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೆ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಹಾಗೂ ಅಗ್ರಭಾಷೆ. ಹಾಗಾಗಿ ಅನ್ಯರಾಜ್ಯ, ವಿದೇಶದಿಂದ ಬಂದಂತವರು ಕನ್ನಡವನ್ನು ಕಡ್ಡಾಯವಾಗಿ ಕಲಿತು ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡವು ಕೆಲವೇ ಜನರದ್ದಾಗದೆ ಏಳು ಕೋಟಿ ಕನ್ನಡಿಗರ ಉಸಿರಾಗಬೇಕು. ಕನ್ನಡವನ್ನು ಕಲಿಯಲು ಮರೆಯಬಾರದು ಎಂದು ಹೇಳಿದರು.
ಕರ್ನಾಟಕದಲ್ಲಿ ಬದುಕನ್ನು ಕಟ್ಟಿಕೊಂಡ ಅನ್ಯ ಭಾಷಿಗರು ಕನ್ನಡವನ್ನು ಮಾತನಾಡುವವರಾಗಬೇಕು.ನಾವು ಯಾವುದೇ ಭಾಷೆಯನ್ನು ದ್ವೇಷಿಸುವುದಿಲ್ಲ. ಎಲ್ಲಾ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಬೇರೆ ರಾಜ್ಯದ ಜನರಂತೆ ನಾವು ನಮ್ಮ ಮಾತೃ ಭಾಷೆಯಾದ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ನಾಡಿನಲ್ಲಿ ಹುಟ್ಟಿದ ನಾವು, ಕನ್ನಡ ನಾಡು ನುಡಿಗೆ ನಮ್ಮದೇ ಅದ ಕೊಡುಗೆಯನ್ನು ನೀಡಿ, ಬೆಳಸಬೇಕು ಎಂದು ಹೇಳಿದರು.
ದೇವರಾಜ ಅರಸು ಅವರು 1973ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು. ನಾಮಕರಣ ಮಾಡಿ ಕಳೆದ ವರ್ಷಕ್ಕೆ 50 ವರ್ಷ ಪೂರೈಸಿದ್ದು, ಅಂದಿನ ಸರ್ಕಾರ ಸಂಭ್ರಮಾಚರಣೆಯನ್ನು ಮಾಡಬೇಕಿತ್ತು. ಕಾರಣಾಂತರಗಳಿಂದ ನಡೆಯದ ಕಾರಣ ಇಂದು ನಮ್ಮ ಸರ್ಕಾರ ಸಂಭ್ರಮಾಚರಣೆ ಮಾಡಬೇಕೆಂದು 2023-24 ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿ ಇಂದು ಕನ್ನಡ ಜನೋತ್ಸವವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ 50 ವರ್ಷಗಳನ್ನು ಪೂರೈಸಿದ್ದು, ಈ ಸಂಭ್ರಮಾಚಾರಣೆಯನ್ನು ಜನರ ಸಾಂಸ್ಕೃತಿಕ ಮುನ್ನೊಟವನ್ನಾಗಿ ಮಾಡಲು ಸರ್ಕಾರವು 4 ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ ಎಂದು ಮಾಹಿತಿ ನೀಡಿದರು.