ಮುಡಾ ಪ್ರಕರಣ | ಜಾರಿ ನಿರ್ದೇಶನಾಲಯದ ವರದಿ ರಾಜಕೀಯ ಪ್ರೇರಿತ : ಸಿಎಂ ಸಿದ್ದರಾಮಯ್ಯ
"ಮುಖ್ಯಮಂತ್ರಿಯಾಗಿರುವ ಕಾರಣದಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ"

ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ʼಜಾರಿ ನಿರ್ದೇಶನಾಲಯದ ವರದಿ ರಾಜಕೀಯ ಪ್ರೇರಿತವಾಗಿದೆ. ಮನಿಲ್ಯಾಂಡ್ರಿಂಗ್ ಆಗಿರುವ ಬಗ್ಗೆ ಯಾವುದೇ ಸಾಕ್ಷಿಯಿಲ್ಲʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಡಿ ವರದಿ ಬಂದಿರುವ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, "ಮುಡಾದ ಮಾಜಿ ಆಯುಕ್ತ ನಟೇಶ್ ಅವರ ಮೇಲೆ ಈಡಿಯವರ ಕ್ರಮ ಕಾನೂನು ಬಾಹಿರ ಮತ್ತು ಮನಿಲ್ಯಾಂಡ್ರಿಂಗ್ ಅಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈಡಿಯ ಸಂಪೂರ್ಣ ವರದಿಯನ್ನು ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ರಾಜಕೀಯ ಪ್ರೇರಿತವಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವರ್ಚಸ್ಸಿಗೆ ಕುಂದು ತರುವಂತಹ ಪ್ರಯತ್ನ ನಡೆಯುತ್ತಿದೆ" ಎಂದರು.
ಮುಖ್ಯಮಂತ್ರಿಯಾಗಿರುವ ಕಾರಣದಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಶ್ರೀಮತಿಯವರಿಗೆ ಈಡಿಯವರ ನೋಟೀಸ್ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರಲಾಗಿದೆ. ನನ್ನ ವರ್ಚಸ್ಸಿಗೆ ಭಂಗ ತರಬೇಕೇಂಬ ದುರುದ್ದೇಶದಿಂದ, ಇಂತಹ ಕುಕೃತ್ಯಗಳನ್ನು ಮಾಡಲಾಗುತ್ತಿದೆ. ಆದರೆ ಅವರ ಪ್ರಯತ್ನಗಳು ಸಫಲವಾಗಲು ಸಾಧ್ಯವಿಲ್ಲ ಎಂದರು.
ಕಾನೂನುಬಾಹಿರ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕ್ರಮ :
ಆರ್ಬಿಐ ನಿಯಮಾವಳಿ ಉಲ್ಲಂಘಿಸುವ, ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಹಾಗೂ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದ್ದು, ಜನರು ಆತಂಕಕ್ಕೊಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ರಾಜ್ಯದ ಜನರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಂತಿಸಿದರು.
ಜನರು ಸಾಲ ಲಭ್ಯವಾಗುವ ಕಡೆ ಸಾಲ ಪಡೆಯುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಹಾಕುವುದಲ್ಲದೇ, ಗೂಂಡಾಗಳ ಮೂಲಕ ಜನರನ್ನು ಹೆದರಿಸಿ, ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವಾರ್ಷಿಕವಾಗಿ ಶೇ.28 ರಿಂದ 30 ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಸಾಲ ಪಡೆದ ಜನರು ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸಲಾಗಿದೆ. ಮೈಕ್ರೋ ಫೈನಾನ್ಸ್ ವ್ಯವಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರಿಸರ್ವ್ ಬ್ಯಾಂಕ್ನ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮೈಕ್ರೋ ಫೈನಾನ್ಸ್ ನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಧ್ಯದಲ್ಲಿಯೇ ಸುಗ್ರೀವಾಜ್ಞೆಯನ್ನು ಹೊರಡಿಸಲಿದ್ದು, ಕಿರುಕುಳ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ :
ಕೇಂದ್ರದ ಬಜೆಟ್ ಅಧಿವೇಶನದಿಂದ ರಾಜ್ಯದ ನಿರೀಕ್ಷೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ ಅನುದಾನವನ್ನು ನೀಡಿಲ್ಲ. 2023-24 ರ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನಿದಾನ ಘೋಷಿಸಿದ್ದಾರೆ. ಆದರೆ ಇದುವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ನಬಾರ್ಡ್ ನ ಅನುದಾನದಲ್ಲಿ ಶೇ.58ರಷ್ಟು ಕಡಿತ ಮಾಡಿದ್ದು, ಕಳೆದ ವರ್ಷ ನಬಾರ್ಡ್ ನ ಅಡಿ ನೀಡಲಾಗಿದ್ದ 5800 ಕೋಟಿ ರೂ. ,ಈ ವರ್ಷ 2345 ಕೋಟಿ ರೂ. ಇಳಿಸಿದ್ದಾರೆ. ಕರ್ನಾಟಕ 4 ಲಕ್ಷ ಕೋಟಿಯಷ್ಟು ಕೇಂದ್ರಕ್ಕೆ ತೆರಿಗೆ ನೀಡಿದರೆ, ರಾಜ್ಯಕ್ಕೆ ಕೇವಲ 60 ಸಾವಿರ ಕೋಟಿ ಮರಳಿ ಬರುತ್ತಿದ್ದುದ್ದು, ತೆರಿಗೆ ಹಂಚಿಕೆಯ ಪಾಲಿನಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದರು.