ಯಾವುದೇ ಕಾರಣಕ್ಕೂ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡಲ್ಲ: ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ಧರಾಮಯ್ಯ
ಯತೀಂದ್ರ ಸಿದ್ದರಾಮಯ್ಯ
ಮೈಸೂರು : ಬಿಜೆಪಿಯವರು ಸುಳ್ಳು ಆರೋಪ ಮಾಡಿ ಸರಕಾರ ಅಸ್ಥಿರಗೊಳಿಸುವ ಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ನೀಡಲ್ಲ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರಜಾಪ್ರಭುತ್ವ ಕೊಲ್ಲುವ ಯತ್ನ ಮಾಡುತ್ತಿದ್ದಾರೆ. ಬಿಜೆಪಿಯ ಮೇನ್ ಟಾರ್ಗೆಟ್ ಅಧಿಕಾರಕ್ಕೆ ಬರವುದು. ಸಿದ್ದರಾಮಯ್ಯರ ಹೆಸರಿಗೆ ಕಪ್ಪು ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಕಾರಣ ಇರಬೇಕು. ಸಿಎಂ ತಪ್ಪು ಮಾಡದೆ ಇದ್ರು ತನಿಖಾ ಸಂಸ್ಥೆಯನ್ನು ಬಳಸಿಕೊಂಡು ರಾಜೀನಾಮೆಗೆ ಯತ್ನಿಸುತ್ತಿದ್ದಾರೆ. ಜನರು ಉಪಚುನಾವಣೆಯಲ್ಲಿ ನಮಗೆ ಬೆಂಬಲ ಸೂಚಿಸಿದ್ದಾರೆ. ನಮಗೆ ನೈತಿಕ ಸ್ಥೈರ್ಯ ಸಿಕ್ಕಿದೆ. ಹೀಗಾಗಿ ನಾವು ರಾಜೀನಾಮೆ ಕೊಡಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಅಧ್ಯಕ್ಷರ ಬಗ್ಗೆ ಮಾತನಾಡಲು ನನಗೆ ಅರ್ಹತೆ ಇಲ್ಲ. ಹೈಕಮಾಂಡ್ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ನಾನು ಅದರ ಬಗ್ಗೆ ಮಾತನಾಡಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಹಾಸನ ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ ಇದೆ :
ಹಾಸನ ಸಮಾವೇಶ ಬಗ್ಗೆ ಎಐಸಿಸಿಗೆ ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ ಇದೆ. ಪತ್ರದ ಬಗ್ಗೆ ನನಗೆ ಗೊತ್ತಿಲ್ಲ. ಆ ಪತ್ರ ಫೇಕ್ ಇರಬಹುದು. ಈಗಾಗಲೇ ಮೈಸೂರಿನಲ್ಲಿ ಮುಡಾ ವಿಚಾರಕ್ಕೆ ಮುಡಾ ಸಮಾವೇಶ ಮಾಡಲಾಗಿದೆ. ಹೀಗಾಗಿ ಹಾಸನದಲ್ಲಿ ಭಾರಿ ಸಮಾವೇಶ ಮಾಡುತ್ತಿದ್ದೇವೆ ಅಷ್ಟೇ. ಈ.ಡಿ ತನಿಖೆಯಲ್ಲಿ ತಂದೆಯ ಆರೋಪದ ಮೇಲೆ ವಿಚಾರಣೆ ನಡೆಯುತ್ತಿಲ್ಲ. ಈ.ಡಿಗೆ ವಿಚಾರಣೆ ಮಾಡುವ ಹಕ್ಕು ಇಲ್ಲ. ಇದರಲ್ಲಿ ಸತ್ಯ ಏನು ಇಲ್ಲ ಅಂಥ ಎಲ್ಲರಿಗೂ ಗೊತ್ತಿದೆ. ಆರ್ ಟಿಐ ಕಾರ್ಯಕರ್ತ ಮಾಡಿರುವ ಆರೋಪದಲ್ಲಿ ಸತ್ಯ ಇಲ್ಲ. ಪ್ರತಿಪಕ್ಷಗಳು ನಮ್ಮ ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಅಧಿಕಾರದ ಹಪಹಪಿಯಿಂದ ಏನ್ ಬೇಕಾದ್ರು ಮಾಡುತ್ತಾರೆ. ನಮಗೆ ಕೇಂದ್ರ ತನಿಖಾ ಸಂಸ್ಥೆಯ ಮೇಲೆ ನಂಬಿಕೆ ಇಲ್ಲ ಎಂದರು.
ಮುಡಾದಲ್ಲಿ 50:50 ಅನುಪಾತದಲ್ಲಿ ಹಗರಣ ಆಗಿದೆ. ಮೇಲ್ನೋಟಕ್ಕೆ ಹಗರಣದ ಆಗಿದ್ದು ಎಲ್ಲರೂ ಮಾತನಾಡುತ್ತಿದ್ದಾರೆ. ಜನರು ಮಾತನಾಡಿಕೊಳ್ಳುತ್ತಿದ್ದಾರೆ. ತನಿಖೆಯಿಂದ ಎಲ್ಲವೂ ಹೊರಬರಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ತಾವು ನ್ಯಾಯಾಲಯದ ಬಗ್ಗೆ ಮಾತನಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ನಾನು ಉದ್ದೇಶಪೂರ್ವಕವಾಗಿ ಕೇಸ್ ಬಗ್ಗೆ ಮಾತನಾಡಿಲ್ಲ. ಜನರ ಮನಸ್ಸಿನಲ್ಲಿ ಏನ್ ಇದೆ ಅದರ ಬಗ್ಗೆ ಮಾತನಾಡಿದ್ದೇನೆ. ದೇಶಕ್ಕೆ ಮಾರಕ ಆಗುವ ರೀತಿ ಕೋರ್ಟ್ ನಿಂದ ತೀರ್ಪು ಬರುತ್ತಿದೆ. ದೇಶಕ್ಕೆ ಒಳ್ಳೆಯ ರೀತಿ ತೀರ್ಪು ಬಂದಿಲ್ಲ. ಸೆಬಿ ವಿಚಾರ, ಅದಾನಿ ವಿಚಾರ, ಬಾಬ್ರಿ ಧ್ವಂಸದ ವಿಚಾರದಲ್ಲಿ ದೇಶದ ಪರ ತೀರ್ಪು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೂರು ಉಪಚುನಾವಣೆ ಫಲಿತಾಂಶ ಬಂದ ಬಳಿಕ ನಮಗೆ ವಿಶ್ವಾಸ ಹೆಚ್ಚಾಗಿದೆ. ಜನರ ಬೆಂಬಲ ನಮ್ಮ ಪರವಾಗಿದೆ. ಹೀಗಾಗಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.
ಸಿಎಂ ಪತ್ನಿಗೆ ಸೇರಿದ ಜಮೀನಿನ ಮೇಲೆ ಮತ್ತೊಂದು ಪ್ರಕರಣ ದಾಖಲು ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಈ ಪ್ರಕರಣ ಕೋರ್ಟ್ ನಲ್ಲಿ ತೀರ್ಮಾನ ಆಗುತ್ತೆ. ದೂರುದಾರರು ಇಷ್ಟು ವರ್ಷಗಳು ಸುಮ್ಮನ್ನಿದ್ದು ಈಗ ಪ್ರಕರಣ ದಾಖಲಿಸಿದ್ದಾರೆ. ತಹಶೀಲ್ದಾರ್ ಮುಂದೆ ಒಪ್ಪಿಗೆ ಸೂಚಿಸಿ ನಮಗೆ ಬರೆದುಕೊಟ್ಟಿದ್ದಾರೆ. ದೇವರಾಜ್ ತಪ್ಪು ಮಾಡಿದ್ರೆ ಇದು ನಮ್ಮ ತಪ್ಪಲ್ಲ. ಕೋರ್ಟ್ ನಲ್ಲೇ ಎಲ್ಲವೂ ತೀರ್ಮಾನ ಆಗುತ್ತದೆ ಎಂದರು.
ಡಿ.5 ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ವಿಚಾರ, ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದಕ್ಕೆ ಸಮಾವೇಶ ಮಾಡಲಾಗುತ್ತಿದೆ. ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಸಮಾವೇಶ ಮೂಲಕ ವಿಪಕ್ಷಗಳ ಆರೋಪಕ್ಕೆ ಉತ್ತರ ಕೊಡಲಿದ್ದಾರೆ. ಉಪಚುನಾವಣೆ ಫಲಿತಾಂಶದಿಂದ ಉತ್ತರ ಸಿಕ್ಕಿದೆ. ಇದು ಕಾಂಗ್ರೆಸ್ ಪಕ್ಷದಿಂದಲೇ ಮಾಡುತ್ತಿರುವ ಸಮಾವೇಶ. ಸಮಾವೇಶಕ್ಕೆ ಪಕ್ಷದ ಸಂಪೂರ್ಣ ಒಪ್ಪಿಗೆ ಇದೆ ಎಂದರು.