ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮುಡಾದಲ್ಲಿ ಕಾನೂನು ಬದ್ಧವಾಗಿ ನಿವೇಶನ ಪಡೆದಿದ್ದಾರೆ : ಸಚಿವ ಮಹದೇವಪ್ಪ
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾನೂನು ಬದ್ಧವಾಗಿ ನಿವೇಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೂ ಸಿದ್ದರಾಮಯ್ಯ ಅವರ ಕುಟುಂಬದವರು ಪಡೆದಿರುವ ನಿವೇಶನಕ್ಕೂ ಸಂಬಂಧವಿಲ್ಲ. ಯಾವುದೇ ದುರುಪಯೋಗ ನಡೆದಿಲ್ಲ. ತಪ್ಪು ಮಾಡಿಲ್ಲ. ರೆಕಾರ್ಡ್ಸ್ ಕ್ರಮಬದ್ಧವಾಗಿದೆ. ನಿಯಮವನ್ನೂ ಮೀರಿಲ್ಲ" ಎಂದು ಹೇಳಿದರು.
ಈ ಪ್ರಕರಣದಲ್ಲಿ ರಾಜಕೀಯವಾಗಿ ತಪ್ಪು ಹುಡುಕಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಕಳಂಕ ಮತ್ತು ಭ್ರಷ್ಟಾಚಾರ ರಹಿತವಾಗಿರುವ ಬದ್ಧತೆಯ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಕೆಲವರು ಆರೋಪ ಮಾಡುತ್ತಿದ್ದಾರೆ ಎಂದರು.
ನಿವೇಶನ ಪಡೆದವರ ಪಟ್ಟಿ ಜಾಹೀರಾತು ಮೂಲಕ ಪ್ರಕಟ :
ಮುಡಾದಲ್ಲಿನ ಹಗರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ವರದಿ ಬಂದ ಬಳಿಕ ರಾಜಕಾರಣಿಗಳ ಸಹಿತವಾಗಿ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. 50:50 ಅನುಪಾತದಲ್ಲಿ ಯಾರೆಲ್ಲಾ ನಿವೇಶನ ಪಡೆದಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ಜಾಹೀರಾತು ಮೂಲಕ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಡಾದಲ್ಲಿ ಜನಪ್ರತಿನಿಧಿಗಳ ನೇಮಕ ರದ್ದು ಮಾಡಲು ಮನವಿ :
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಶಾಸಕರು, ವಿಧಾನ ಪರಿಷತ್ ಸದಸ್ಯರ ನೇಮಕ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿರುವುದಾಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಹಿಂದೆ ಮುಡಾದಲ್ಲಿ ಮೂವರು ಮಾತ್ರ ಸದಸ್ಯರಿದ್ದರು. ಅದೇ ಮಾದರಿಯನ್ನು ಮುಂದುವರಿಸುವಂತೆ ಕೋರಿದ್ದೇನೆ. ಮುಖ್ಯಮಂತ್ರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಬಿ.ಎಂ.ರಾಮು, ಎಂ. ಶಿವಣ್ಣ, ಕೆ.ಮಹೇಶ್ ಇದ್ದರು.