ಮೈಸೂರು | ಮುಡಾ ಮಾಜಿ ಆಯುಕ್ತರ ವಿರುದ್ಧ ಕ್ರಮಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ದೂರು
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಕ್ರಮಗಳಲ್ಲಿ ಭಾಗಿಯಾಗಿ ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಿರುವ ಹಿಂದಿನ ಆಯುಕ್ತರುಗಳಾದ ನಟೇಶ್ ಮತ್ತು ದಿನೇಶ್ ಕುಮಾರ್ ಜಿ.ಟಿ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ :
ನಾನು (ಶಾಸಕ ಶ್ರೀವತ್ಸ) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾದ ಬಳಿಕ ಪ್ರಾಧಿಕಾರದ ನಿವೇಶನಗಳನ್ನು ಕಾನೂನು ಬಾಹಿರವಾಗಿ ಹಾಗೂ ಅಕ್ರಮವಾಗಿ 50:50 ಅನುಪಾತದಲ್ಲಿ ಸರಿ ಸುಮಾರು 5.00 ಲಕ್ಷ ಚದರ ಅಡಿಗೂ ಹೆಚ್ಚಿನ ನಿವೇಶನಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿರುವುದು ಕಂಡುಬಂದ ಹಿನ್ನಲೆಯಲ್ಲಿ ಅಂತಹ ಆದೇಶಗಳನ್ನು ರದ್ದುಗೊಳಿಸಬೇಕು. ಹಾಗೂ ಈ ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದಂತಹ ದಿನೇಶ್ ಕುಮಾರ್ ಜಿ.ಟಿ. ಅವರ ವಿರುದ್ಧ ಮತ್ತು ಇಂತಹ ಪ್ರಕರಣಗಳಲ್ಲಿ ಭಾಗಿಯಾದಂತಹ ಇತರೆ ಅಧಿಕಾರಿ ವರ್ಗದವರ ಮೇಲೆ ಸೂಕ್ತ ತನಿಖೆ ನಡೆಸಿ ಸರಿಯಾದ ಶಿಸ್ತು ಕ್ರಮ ಕೈಗೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಇವರಿಗೆ ಸೂಕ್ತ ದಾಖಲೆಗಳೊಂದಿಗೆ ಪತ್ರ ಬರೆದಿದ್ದರೂ ಸಹ ಈವರೆಗೆ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಇಂತಹ ಅಕ್ರಮಗಳಿಂದ ಸರಕಾರದ ಬೊಕ್ಕಸಕ್ಕೆ ಸುಮಾರು 5 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿರುತ್ತದೆ. ಈ ಕುರಿತಂತೆ ಕಳೆದ 2 ತಿಂಗಳಿಂದ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಚರ್ಚೆಯಾಗುತ್ತಿದ್ದು, ಕಾನೂನು ಬಾಹಿರವಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವಂತಹ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಈ ಹಿಂದಿನ ಆಯುಕ್ತರಗಳಾದ ನಟೇಶ್ ಮತ್ತು ದಿನೇಶ್ ಕುಮಾರ್ ಜಿ.ಟಿ. ಹಾಗೂ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವಂತಹ ಇತರೆ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈ ಕೂಡಲೇ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ವರ್ಗದವರನ್ನು ಬಂಧಿಸಿ ಸರಕಾರಕ್ಕೆ ಆಗಿರುವ ನಷ್ಟವನ್ನು ಸದರಿ ಅಧಿಕಾರಿಗಳಿಂದಲೇ ಭರಿಸುವಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.