ಜಾತಿ ಜನಗಣತಿ ವರದಿ ಜಾರಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಮಾಜಿ ಶಾಸಕ ಯತೀಂದ್ರ ಸಿದ್ಧರಾಮಯ್ಯ
ಮೈಸೂರು: ಸಮಾಜದ ಕಟ್ಟಕಡೆಯನ್ನು ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಆಲೋಚನೆಯಲ್ಲಿ ನಡೆಸಿರುವ ಜಾತಿ ಜನಗಣತಿ ವರದಿ ಜಾರಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಘಟಕದ ವತಿಯಿಂದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರ ಜಾತಿ ಜನಗಣತಿ ನಡೆಸಿತು. ಈಗ ವರದಿ ಸ್ವೀಕರಿಸುತ್ತಿದೆ. ಆದರೆ, ಬಿಜೆಪಿ ಜಾತಿ ಗಣತಿ ಮೂಲಕ ದೇಶ ಒಡೆಯುತ್ತಿದೆ ಎಂದು ಆರೋಪಿಸಿದೆ. ಒಡೆಯೋದಕ್ಕೆ ಏನಿದೆ? ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ಜಾತಿ ಗಣತಿ ನಡೆಸಬೇಕೆಂಬುದು ನಮ್ಮ ಪಕ್ಷದ ಆದ್ಯತೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ಮತ್ತು ದಲಿತ ಸಮಾಜವನ್ನು ಸಂವಿಧಾನ ರಕ್ಷಿಸಿದೆ. ಅದೇ ವರ್ಗಗಳು ಸಂವಿಧಾನವನ್ನು ರಕ್ಷಿಸಬೇಕು. ಆದರೆ, ದಿನನಿತ್ಯ ಸಂವಿಧಾನ ರಕ್ಷಿಸುತ್ತಿರುವುದು ನಮಗೆ ತಿಳಿದಿಲ್ಲ. ಸಂಪ್ರದಾಯವಾದಿಗಳು ಮತ್ತು ಹಿಂದುತ್ವವಾದಿಗಳಿಂದ ಸಂವಿಧಾನಕ್ಕೆ ಅಪಾಯ ಎದುರಾಗಿದೆ ಎಂದರು.
ಅಂಬೇಡ್ಕರರ ಸಂವಿಧಾನ ಬಹುಸಂಖ್ಯಾತ ಶೋಷಿತರಿಗೆ ಸಮಾನ ಹಕ್ಕು ಕೊಟ್ಟಿತು. ಸನಾತನ ಮತ್ತು ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆ ಇರಬೇಕೆಂದು ಬಯಸುವವರು ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಿಸಲು ಯತ್ನಿಸುತ್ತಿದ್ದಾರೆ ಎಂದು ನುಡಿದರು.
ಸಾಮಾಜಿಕವಾಗಿ ಶೈಕ್ಷಣಿಕವಾಗಿ ಶತಮಾನಗಳಿಂದ ಹಿಂದುಳಿದವರಿಗೆ ಮೀಸಲಾತಿ ಕೊಡಲಾಗಿದೆ. ಈಗ ಮುಂದುರಿದ ಜಾತಿಗಳಿಗೂ ಮೀಸಲಾತಿ ನೀಡಿದರು. ಅವರು ಒಂದೇ ಒಂದು ಹೋರಾಟ ಮಾಡಲಿಲ್ಲ. ಇದನ್ನೂ ಯಾರು ವಿರೋಧಿಸಲಿಲ್ಲ. ಆದರೆ, ದಲಿತರು ಮೀಸಲಾತಿ ಹೆಚ್ಚಿಸುವಂತೆ ಬೀದಿಗಿಳಿದು ಹೋರಾಟ ಮಾಡಬೇಕು. ಅದನ್ನು ಯಾರು ಕೇಳುವುದಿಲ್ಲ ಎಂದರು.
ಕೋಮುವಾದಿಗಳು ಬಂಡವಾಳಶಾಹಿ ಉದ್ಯಮಿಗಳಿಂದ ಸಂಪತ್ತಿನ ಬಲ ಪಡೆದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದಾರೆ. ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲಾಗುತ್ತಿದೆ. ಧರ್ಮ, ಜಾತಿಗಳ ಸಂಘರ್ಷ ಏರ್ಪಟ್ಟಿದೆ. ಒಂದು ಧರ್ಮದವರನ್ನು ಕೊಂದರು ತಪ್ಪಿಲ್ಲ. ಕಾನೂನು ಗಾಳಿಗೆ ತೂರಿದ್ದಾರೆ ಎಂದು ತಿಳಿಸಿದರು.