ಮೈಸೂರು: ರಾಮನ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹರಿಗೆ ಘೇರಾವ್ ಮಾಡಿ ವಾಪಸ್ ಕಳುಹಿಸಿದ ದಲಿತರು
'ದಲಿತ ವಿರೋಧಿಯಾದ ನೀವು ದಲಿತರ ಜಮೀನಿಗೆ ಏಕೆ ಬರುತ್ತೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
ಮೈಸೂರು, ಜ.22: ಅಯೋಧ್ಯೆ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ಶ್ರೀ ರಾಮನ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತರು ಘೇರಾವ್ ಮಾಡಿ ಪೂಜೆಗೆ ಅವಕಾಶ ಕಲ್ಪಿಸದೆ ವಾಪಸ್ ಕಳುಹಿಸಿದ ಘಟನೆ ಮೈಸೂರು ತಾಲೂಕು ಹಾರೋಹಳ್ಳಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಆಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ರಾಮಲಲ್ಲಾ ಮೂರ್ತಿಯ ಕೃಷ್ಣ ಶಿಲೆ ಕಲ್ಲು ಹಾರೋಹಳ್ಳಿ ಬಳಿಯ ಗಯಜ್ಜೇಗೌಡನಪುರದ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿತ್ತು. ಈ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಭೂಮಿಪೂಜೆ ಮತ್ತು ರಾಮನ ಪೂಜೆ ಏರ್ಪಡಿಸಲಾಗಿತ್ತು.
ಈ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಇಂದು ಬೆಳಗ್ಗೆ ಆಗಮಿಸುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತ ಮುಖಂಡರು ಜಮೀನಿನ ಬಳಿಯೇ ತಡೆದು ಘೇರಾವ್ ಮಾಡಿ "ಗೋ ಬ್ಯಾಕ್ ಪ್ರತಾಪ್ ಸಿಂಹ', 'ದಲಿತ ವಿರೋಧಿ ಪ್ರತಾಪ್ ಸಿಂಹನಿಗೆ ಧಿಕ್ಕಾರ'.. ಇತ್ಯಾದಿ ಘೋಷಣೆಗಳನ್ನು ಕೂಗಿದರು.
ಇದರಿಂದ ವಿಚಲಿತರಾದ ಸಂಸದ ಪ್ರತಾಪ್ ಸಿಂಹ ಸಮಜಾಯಿಷಿ ಕೊಡಲು ಮುಂದಾದರು. ಆದರೆ ಗ್ರಾಮಸ್ಥರು ಅದಕ್ಕೆ ಒಪ್ಪದೆ 'ಇಲ್ಲಿಗೆ ನೀವು ಬರುವುದು ಬೇಡ, ಇಲ್ಲಿಂದ ಜಾಗ ಖಾಲಿ ಮಾಡಿ' ಎಂದು ತಿಳಿಸಿದರು.
ಮಾಜಿ ತಾಪಂ ಸದಸ್ಯ ಹಾರೋಹಳ್ಳಿ ಸುರೇಶ್ ಮಾತನಾಡಿ, ''ನೀವೊಬ್ಬ ದಲಿತ ವಿರೋಧಿ. ನಿಮ್ಮ ನಡವಳಿಕೆಯಿಂದ ದಲಿತರ ಭಾವನೆಗೆ ಧಕ್ಕೆಯುಂಟಾಗಿದೆ. ಮಹಿಷ ದಸರಾ ಆಚರಣೆ ಸಂದರ್ಭದಲ್ಲಿ ದಲಿತರನ್ನು ತುಳಿದು ಹಾಕಿ ಬಿಡುತ್ತೇನೆ, ಹೊಸಕಿ ಹಾಕಿ ಬಿಡುತ್ತೇನೆ ಎಂದು ಬೆದರಿಸಿದ್ದ ನೀವು ದಲಿತರ ಜಮೀನಿಗೆ ಏಕೆ ಬರುತ್ತೀರಿ? ಇಲ್ಲಿಂದ ಹೊರ ನಡೆಯಿರಿ'' ಎಂದು ಹೇಳಿದರು.
ಈ ವೇಳೆ ಸಂಸದ ಪ್ರತಾಪ್ ಸಿಂಹ, "ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ದಲಿತ ವಿರೋಧಿಯಲ್ಲ" ಎಂದು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ಮಾಡಿದರು. ಆದರೆ ಇದರಿಂದ ಸಮಾಧಾನಗೊಳ್ಳದ ಗ್ರಾಮಸ್ಥರು, "ನೀವು ಏನು ಹೇಳುವುದು ಬೇಡ, ಇಲ್ಲಿಂದ ವಾಪಸ್ ಹೋಗಿ" ಪಟ್ಟು ಹಿಡಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಪಟ್ಟರಾದರೂ ಗ್ರಾಮಸ್ಥರು ಮಾತ್ರ ಅದಕ್ಕೆ ಬಗ್ಗಲಿಲ್ಲ. ನಂತರ ಸಂಸದ ಪ್ರತಾಪ್ ಸಿಂಹ ಅವರನ್ನೇ ಅಲ್ಲಿಂದ ವಾಪಸ್ ಹೋಗುವಂತೆ ಶಾಸಕರು ವಿನಂತಿಸಿದರು.
ಇದರಿಂದ ಬೇಸರಗೊಂಡ ಸಂಸದ ಪ್ರತಾಪ್ ಸಿಂಹ ಅಲ್ಲಿಂದ ಹೊರಟು ಹೋದರು. ಆ ಬಳಿಕ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.
ತಾ.ಪಂ. ಮಾಜಿ ಸದಸ್ಯ ಹಾರೋಹಳ್ಳಿ ಸುರೇಶ್, ದಸಂಸ ಮುಖಂಡ ನಟರಾಜ್, ಗ್ರಾಮಸ್ಥರಾದ ಚಲುವರಾಜ್, ಸೋಮಶೇಖರ್, ಬೀರಪ್ಪ, ಧನಗಳ್ಳಿ ಸ್ವಾಮಿ, ರಾಜೇಶ್ ರಾಜೇಂದ್ರ, ಕಿರಣ್, ಸಿ.ಡಿ.ಚಲುವರಾಜು, ಸುನೀಲ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.