ಝಮೀರ್ ಅಹ್ಮದ್ ರನ್ನು ಕುಳ್ಳ ಎಂದು ಕರೆದಿಲ್ಲ, ನಮ್ಮ ಸ್ನೇಹ ರಾಜಕೀಯವಾಗಿ ಅಷ್ಟೇ: ಎಚ್.ಡಿ.ಕುಮಾರಸ್ವಾಮಿ
"ಕರಿಯ, ಕುಳ್ಳ ಎಂದು ಮಾತನಾಡಿಸಿಕೊಳ್ಳುವ ಸಂಸ್ಕೃತಿಯಿಂದ ಬಂದವ ನಾನಲ್ಲ"
ಮೈಸೂರು: "ನಾನು ಯಾವತ್ತೂ ಝಮೀರ್ ಅಹ್ಮದ್ ಖಾನ್ ಅವರನ್ನು ಕುಳ್ಳ ಎಂದು ಕರೆದಿಲ್ಲ. ನಮ್ಮ ಸ್ನೇಹ ಇದ್ದದ್ದು ರಾಜಕೀಯವಾಗಿ ಅಷ್ಟೆ" ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.
''ಕರಿಯ, ಕುಳ್ಳ ಎಂದು ಮಾತನಾಡಿಸಿಕೊಳ್ಳುವ ಸಂಸ್ಕೃತಿಯಿಂದ ಬಂದವ ನಾನಲ್ಲ. ಝಮೀರ್ ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ'' ಎಂದು ಕುಮಾರಸ್ವಾಮಿ ಟೀಕಿಸಿದರು.
'ಚಾಮುಂಡಿ ತಾಯಿ ಮುಂದೆ ನಿಂತು ಹೇಳುತ್ತಿದ್ದೇನೆ. ಈ ಹಿಂದೆ ಬಸವರಾಜ ಹೊರಟ್ಟಿ ಒಮ್ಮೆ ನನ್ನನ್ನು 'ಏ ಕುಮಾರ' ಎಂದಾಗ ಅವರನ್ನು ಹೊಡೆಯಲು ಹೋಗಿದ್ದ ಗಿರಾಕಿ ಇವರು ಎಂದು ಕುಮಾರಸ್ವಾಮಿ ಹೇಳಿದರು.
ಝಮೀರ್ ಮಾತುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಇದು ನಾಗರಿಕ ಸರ್ಕಾರನಾ? ಇಂಥ ಹೇಳಿಕೆಗಳನ್ನು ನೀಡುವ ಅಮಾಯಕರ ಮೇಲೆ ಎಷ್ಟು ಕೇಸ್ ಹಾಕಿ ಜೈಲಿಗೆ ಹಾಕಿಲ್ಲ ಈ ಸರ್ಕಾರ? ಈಗೇಕೆ ಸುಮ್ಮನೆ ಇದೆ? ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿಗೆ ದೇವೇಗೌಡರು ಗರ್ವಭಂಗ ಮಾಡುತ್ತೇನೆ, ಸೊಕ್ಕು ಮುರಿಯುತ್ತೇನೆ ಎನ್ನುವುದು ಮಾನನಷ್ಟ ಹೇಳಿಕೆಯಾಗುತ್ತದೆಯೇ ಎಂದು ಪ್ರಶ್ನಿಸಿದರು.
ಚನ್ನಪಟ್ಟಣದಲ್ಲಿ ಜನತೆಯ ಆಶೀರ್ವಾದವಿದೆ, ಉತ್ತಮವಾದ ರೀತಿಯಲ್ಲಿ ಗೆಲುವು ಸಾಧಿಸುತ್ತೇವೆ. ಝಮೀರ್ ಹೇಳಿಕೆಯಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ, ನಾವು ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಕುಮಾಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.