ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ, ಭೂ ಸುಧಾರಣೆ ಜಾರಿಯಾಗದೆ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ : ದಿನೇಶ್ ಅಮೀನ್ ಮಟ್ಟು
ದಿನೇಶ್ ಅಮೀನ್ ಮಟ್ಟು
ಮೈಸೂರು : ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ಮತ್ತು ಭೂ ಸುಧಾರಣೆ ಜಾರಿಯಾಗದೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಸೂಕ್ತ ಎನಿಸದು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಆಕ್ರೋಶ ವ್ಯಕ್ತಪಡಿಸಿದರು.
ನಗರದ ರಂಗಾಯಣದ ಅವರಣದ ಬಿ.ವಿ.ಕಾರಂತರ ರಂಗಚಾವಡಿಯ ಮಂದಿರದಲ್ಲಿ ಬಹುರೂಪಿಯ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಶನಿವಾರ ನಡೆದ ‘ಸಾಮಾಜಿಕ ನ್ಯಾಯ-ಚಳವಳಿಗಳು ಮತ್ತು ರಂಗಭೂಮಿ’ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರ್ಥಿಕ, ಸಾಮಾಜಿಕ ಸಮಾನತೆ ಸಾಧಿಸದೆ ರಾಜಕೀಯ ಸ್ವಾತಂತ್ರ್ಯ ಪಡೆದರೆ ಪ್ರಜಾಪ್ರಭುತ್ವ ವಿಫಲವಾಗಲಿದೆ. ಅತೃಪ್ತ ಜನರು ರೊಚ್ಚಿಗೆದ್ದು ಪ್ರಜಾಪ್ರಭುತ್ವದ ಸೌಧವನ್ನು ಕೆಡವಿ ಹಾಕಲಿದ್ದಾರೆ. ಸಂವಿಧಾನ ಎಷ್ಟೇ ಒಳ್ಳೆಯದಿದ್ದರು ಅನುಷ್ಠಾನ ಮಾಡುವವನು ಕೆಟ್ಟವನಾದರೆ ಅದರಿಂದ ಸಮಾಜಕ್ಕೆ ಕೆಟ್ಟದೆ ಆಗಲಿದೆ. ಈಗ ದೇಶದಲ್ಲಿ ಇದೇ ಪರಿಸ್ಥಿತಿ ಇದೆ ಎಂದರು.
ದೇಶದಲ್ಲಿ ಪ್ರತಿ 16 ನಿಮಿಷಕ್ಕೆ ಒಮ್ಮೆ ದಲಿತರ ಮೇಲೆ ದೌರ್ಜನ್ಯ, ನಿತ್ಯ 4 ದಲಿತ ಮಹಿಳೆಯರ ಮೇಲೆ ಸವರ್ಣಿಯರ ಅತ್ಯಾಚಾರ, 12 ದಲಿತರ ಕೊಲೆ ಆಗುತ್ತಿದೆ. ಇದು ಗಮನಕ್ಕೆ ಬರುತ್ತಿರುವ ಘಟನೆಗಳಷ್ಟೇ. ರಾಜ್ಯದ ಶೇ.70 ದಲಿತರ ಬಳಿ ಭೂಮಿ ಇಲ್ಲ. ದಲಿತರಿಗೆ ಶೇ.24ರಷ್ಟು ಮೀಸಲಾತಿ ದೊರೆತಿಲ್ಲ. ಮೀಸಲಾತಿ ಮತ್ತು ಭೂ ಸುಧಾರಣೆಯ ಗಂಭೀರ ವಿಚಾರದ ಬಗ್ಗೆ ಪಿಎಚ್.ಡಿಗಳು ಆಗಬೇಕು ಎಂದು ಹೇಳಿದರು.
ದೇಶದ ಒಟ್ಟು ವಾರ್ಷಿಕ ಆದಾಯದ ಸರಾಸರಿ 2.4 ಲಕ್ಷ ಕೋಟಿ ರೂ. ಇದೆ. ಇದರಲ್ಲಿ ಶೇ.50ರಷ್ಟು ಜನರ ವಾರ್ಷಿಕ ಆದಾಯ 53 ಸಾವಿರ ರೂ. ಶೇ.10ರಷ್ಟು ಜನ 10 ಲಕ್ಷ ವಾರ್ಷಿಕ ಆದಾಯವಿದೆ. ಇದರಿಂದ ಜಿಡಿಪಿ ಹೆಚ್ಚಳವಾಗಿರಬಹುದು. ಆದರೆ, ಆಸ್ತಿ ಸಮಾನವಾಗಿ ಹಂಚಿಕೆಯಾಗದ ಕಾರಣ ಅನಾಹುತಗಳು ಸಂಭವಿಸುತ್ತಿವೆ ಎಂದು ಹೇಳಿದರು.
ಆಮೆರಿಕಾ, ಚೀನಾ ಬಿಟ್ಟರೆ ಇಡೀ ಪ್ರಪಂಚದಲ್ಲಿ ಹೆಚ್ಚು ಶತ ಕೋಟ್ಯಾಧೀಶರು ಇರುವುದು ಭಾರತದಲ್ಲಿ. ಕಳೆದ ವರ್ಷ 102 ಮಂದಿ ಇದ್ದ ಬಿಲಿನೆಯರ್ಸ್ ಇಂದು 145 ಮಂದಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಬೇಕು? ಎಂದು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯದ ಸ್ಥಾಪನೆಗೆ ಸಂವಿಧಾನವಿದೆ. ಸಂವಿಧಾನ ಆಶಯಗಳ ಅನುಷ್ಠಾನಗೊಂಡಿರುವ ಬಗ್ಗೆ ಆತ್ಮವಲೋಕನ ಮಾಡಬೇಕು. ಆದರೆ, ಇದನ್ನು ಸಂಸತ್ತು ಮಾಡಬೇಕು. ಆದರೆ, ಸಂಸತ್ತಿನಲ್ಲಿ 256 ಮಂದಿ ಕ್ರಿಮಿನಲ್ ಸಂಸದರಿದ್ದಾರೆ. ಇವರೆಲ್ಲರೂ ಜಾಮೀನಿನ ಮೇಲೆ ಸಂಸತ್ತಿನಲ್ಲಿದ್ದಾರೆ. ಇಂತಹ ಕ್ರಿಮಿನಲ್ಗಳನ್ನು ಸಂಸತ್ತಿನೊಳಗೆ ಬಿಟ್ಟು ಸಾಮಾಜಿಕ ನ್ಯಾಯ ಸಂವಿಧಾನವನ್ನು ಅನುಷ್ಠಾನಗೊಳ್ಳಬೇಕು ಎಂದರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಅಪ್ರಾಪ್ತ ಹುಡುಗಿಯ ಮೇಲೆ 80 ವರ್ಷದ ಹಿರಿಯ ರಾಜಕಾರಣಿ ಲೈಂಗಿಕ ದೌರ್ಜನ್ಯ ನಡೆಸುತ್ತಾನೆ. ಆತನ ಮೇಲೆ ಜಾಮೀನು ರಹಿತ ಪೋಕ್ಸೋ ಪ್ರಕರಣವಿದೆ. ಜೈಲಿನಲ್ಲಿ ಇರಬೇಕಿತ್ತು. ಆದರೆ, ಜಾಮೀನಿನ ಮೇಲೆ ಹೊರಗಡೆ ಇದ್ದಾನೆ. ಇದು ನ್ಯಾಯಾಂಗ ನಡೆದುಕೊಳ್ಳುತ್ತಿರುವ ರೀತಿ ಎಂದು ಟೀಕಿಸಿದರು.
ದಲಿತರಿಗೆ ಮೀಸಲಾತಿ ಕಾರಣದಿಂದ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಆದರೆ, ಮುಸ್ಲಿಂರಿಗೆ ಪ್ರಾತಿನಿಧ್ಯವೇ ಇಲ್ಲವಾಗಿದೆ. 1952ರಲ್ಲಿ 25 ಮುಸ್ಲಿಂ ಸಮುದಾಯದ ಸಂಸದರಿದ್ದರೆ. 2024ರಲ್ಲಿ 24 ಮಂದಿ ಇದ್ದಾರೆ. ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಮುದಾಯದ ಸದಸ್ಯನಿಲ್ಲ. ಯಾವ ಪ್ರಜಾಪ್ರಭುತ್ವ ಬಗ್ಗೆ ಮಾತನಾಡಬೇಕು ಎಂದರು.
ಮೀಸಲಾತಿಯ ಬಗ್ಗೆ ಇಂದು ಬಹಳಷ್ಟು ಚರ್ಚೆಯಗುತ್ತಿದೆ. ಆದರೆ, ಶೇ.2ರಷ್ಟು ಮಾತ್ರ ಸರ್ಕಾರದ ಉದ್ಯೋಗಗಳಿವೆ. ಶೇ.98ರಷ್ಟು ಖಾಸಗಿ ಕ್ಷೇತ್ರದಲ್ಲಿ ಇದೆ. ಈ ಬಗ್ಗೆ ಯಾರು ಮಾತನಾಡುತ್ತಿಲ್ಲ. ಹೀಗಾಗಿ ಖಾಸಗಿ ವಲಯವನ್ನು ರಾಷ್ಟ್ರೀಕರಣಗೊಳಿಸಬೇಕು. ಕೃಷಿ ಪದಾರ್ಥಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಭೂಮಿ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಜಾಪ್ರಭುತ್ವದ ಆಶಯ ಅನುಷ್ಠಾನ ಮತ್ತು ಜನತೆಯ ಹೋರಾಟದ ವಿಷಯದ ಕುರಿತು ಅಖಿಲ ಭಾರತ ಜನವಾದಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್.ವಿಮಲಾ ಮಾತನಾಡಿ, ಜನ ಪ್ರತಿನಿಧಿಗಳು ಒಂದು ಜಾತಿ, ಧರ್ಮ, ವರ್ಗದ ಪ್ರತಿನಿಧಿಗಳಾಗಿದ್ದಾರೆ. ಸಂವಿಧಾನದ ಆಶಯಗಳು ಅಸ್ಥಿರಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಸವಾಜವನ್ನು ಬಹುತ್ವದ ನೆಲೆಯಲ್ಲಿ ಕಟ್ಟಿಕೊಡುವ ರಂಗಭೂಮಿ ಮೇಲೆ ಇದೆ ಎಂದರು.
ಶೈಕ್ಷಣಿಕ ಹಿನ್ನಲೆಯಲ್ಲಿ ಸಾಮಾಜಿನ ನ್ಯಾಯದ ಚಾರಿತ್ರಿಕ ನಡೆ ವಿಷಯದ ಕುರಿತು ಶ್ರೀಪಾದಭಟ್ ಮಾತನಾಡಿ, ಶಿಕ್ಷಣ ಎಂಬುದು ಸಾಮಾಜಿಕ ನ್ಯಾಯ. ಆದರೆ, ನೂತನ ಶಿಕ್ಷಣ ಪದ್ಧತಿ ಎನ್ಇಪಿ ಯಲ್ಲಿ ಸಾಮಾಜಿಕ ನ್ಯಾಯ ರೂಪಿಸಿಲ್ಲ. ಶಿಕ್ಷಣ ಸಾರ್ವತ್ರಿಕರಣ ಆಗಿಲ್ಲ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು. ಬ್ರಾಹ್ಮಣರು ಅಕ್ಷರವನ್ನು ಹಿಡಿದಿಟ್ಟುಕೊಂಡು ಪ್ರಕ್ಷುಬ್ಧ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ಬ್ರಾಹ್ಮಣರು ಚಾತುವರ್ಣ ಪರಿಪಾಲನೆ ಮಾಡುತ್ತಾ, ಒಕ್ಕಲಿಗ-ಲಿಂಗಾಯತ ಸಮುದಾಯ ಮರ್ಯಾದೆ ಹತ್ಯೆ ಮಾಡುತ್ತಾ, ನಮಗೂ ಮೀಸಲಾತಿ ಕೊಡಿ ಎಂದು ಕೇಳುತ್ತಿರುವಾಗ ಯಾವ ಸಾಮಾಜಿಕ ನ್ಯಾಯವನ್ನು ಪಾಲನೆ ಮಾಡಲು ಸಾಧ್ಯ ಎಂದು ತೀವ್ರವಾಗಿ ಪ್ರಶ್ನಿಸಿದರು.
ಸೈದ್ಧಾಂತಿಕವಾಗಿ ಗಟ್ಟಿಯಾಗಿ ನಿಲ್ಲಬೇಕು ಎನ್ನುವುದನ್ನು ನಾನು ಆರ್ಎಸೆಸ್ಸ್ ನಿಂದ ಕಲಿತೆ. ಆರ್ಎಸೆಸ್ಸ್ ನೂರನೇ ವರ್ಷದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗುವುದನ್ನು ತಡೆದಿದ್ದೇವು. ಕೇವಲ 15 ವರ್ಷದಿಂದ ಅವರು ಆಡಳಿತ ಮಾಡುತ್ತಿದ್ದಾರೆ ಎಂದು ಭಾವಿಸಬಾರದು. ಇದಕ್ಕಾಗಿ ಅವರು 90 ವರ್ಷ ಕೆಲಸ ಮಾಡಿದ್ದಾರೆ. ಅಲ್ಲಿಯೂ ಸಲುತ್ತೇವೆ. ಇಲ್ಲಿಯೂ ಸಲ್ಲುತ್ತೇವೆ ಎಂಬಂತೆ ಇರಬಾರದು.
- ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತ.