ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕೊಟ್ಟಿದ್ದು ಡಾ.ಬಿ.ಆರ್.ಅಂಬೇಡ್ಕರ್: ಸಚಿವ ಎಚ್.ಸಿ ಮಹದೇವಪ್ಪ
ಮೈಸೂರು: 75 ನೇ ಅಮೃತ ಮಹೋತ್ಸವ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ದ್ವಜರೋಹಣ ನೆರವೇರಿಸಿ ಮಾತನಾಡಿದರು.
ನೂರಾರು ವರ್ಷಗಳ ಸತತ ಹಾಗೂ ಸುದೀರ್ಘ ಹೋರಾಟದ ಮೂಲಕ 1947 ರ ಆಗಸ್ಟ್ 15 ರಂದು ದಾಸ್ಯದ ಸರಪಳಿ ಕಳಚಿ ಸ್ವಾತಂತ್ರ‍್ಯ ಪಡೆದುಕೊಂಡೆವು. ಅದರಂತೆ ನಮ್ಮದೇ ಆದ ಸಂವಿಧಾನ ಹೊಂದುವ ಕನಸು ನನಸಾದುದು ೧1950 ಜನವರಿ 26 ರಂದು. ಅಂದು ನಾವೇ ರಚಿಸಿಕೊಂಡ ಸಂವಿಧಾನದ ಬೆಳಕಿನಲ್ಲಿ ನಮ್ಮನ್ನು ನಾವೇ ಆಳಿಕೊಳ್ಳುತ್ತಿದ್ದೇವೆ ಎಂದರು.
ಇಂದು ನಾವು ಸರ್ವತಂತ್ರ ಸ್ವತಂತ್ರರೆಂದು ಘೋಷಿಸಿಕೊಂಡ ಸುದಿನ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಬಾಳುತ್ತೇವೆ, ರಾಷ್ಟ್ರದ ಸಾರ್ವಭೌಮತೆಯನ್ನು ಗೌರವಿಸಿ, ಅದನ್ನು ಎತ್ತಿ ಹಿಡಿಯುತ್ತೇವೆ. ನಮ್ಮದೇ ದೇಶ, ನಮ್ಮದೇ ಸಂವಿಧಾನ, ನಮ್ಮದೇ ಆಡಳಿತ ನಾವು ಸ್ವತಂತ್ರರಾಗಿ ಬದುಕುತ್ತೇವೆ ಎನ್ನುವ ಶಪಥವನ್ನು ಸಮಸ್ತ ಭಾರತೀಯರು ಕೈಗೊಂಡ ಪವಿತ್ರ ದಿನ ಎಂದರು.
ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕಟ್ಟಿಕೊಟ್ಟದ್ದು ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಹಿರಿಯರ ತಂಡ. ಅವರ ಅವಿರತ ಪ್ರಯತ್ನದ ಫಲವಾಗಿ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನ ರೂಪಗೊಂಡಿದೆ. ನಮ್ಮ ಗಣರಾಜ್ಯದ ಇಂದಿನ ಅಸ್ತಿತ್ವಕ್ಕೆ ನಮ್ಮ ಸಂವಿಧಾನವೇ ತಳಹದಿ. ದೇಶಪ್ರೇಮ ಮತ್ತು ಅದ್ಭುತ ಅನುಭವೀ ಪಾಂಡಿತ್ಯದಿಂದಾಗಿ ನಮಗೆ ಈ ಸಂವಿಧಾನ ದೊರೆತಿದೆ. ವಿಶ್ವದಲ್ಲಿಯೇ ಅತ್ಯಂತ ಸುದೀರ್ಘವಾದ, ಅತ್ಯಂತ ಸುಸಂಬದ್ಧವಾದ ಲಿಖಿತ ಸಂವಿಧಾನ ನಮ್ಮದು ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಹೇಳಿದಂತೆ ನ್ಯಾಯವೆಂದರೆ ಸ್ವಾತಂತ್ರ‍್ಯ ಸಮಾನತೆ ಮತ್ತು ಸೌಹಾರ್ದ. ಅವರ ಈ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳು ದೃಢವಾಗುವುದು ಇದರಿಂದಲೇ ಎಂಬ ನಂಬಿಕೆ ನಮ್ಮದು. ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತಮ್ಮ ತನು-ಮನ-ಧನಗಳಿಂದ ತ್ಯಾಗಗೈದ, ಬಲಿದಾನ ನೀಡಿದ ನಾಯಕರನ್ನು, ಅಸಂಖ್ಯಾತ ಯೋಧರನ್ನು ಹಾಗೂ ದೇಶಾಭಿಮಾನಿಗಳನ್ನು ನೆನೆಯುವುದು ಮತ್ತು ಅವರು ಆಶಿಸಿದಂತೆ, ರಾಷ್ಟ್ರವನ್ನು ಅಭ್ಯುದಯದ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಹೇಳಿದರು.
ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜೋತಿ, ಶಕ್ತಿ, ವಿದ್ಯಾನಿಧಿ ಯೋಜನೆಗಳ ಮೂಲಕ ರಾಜ್ಯದ ಕೋಟ್ಯಾಂತರ ಜನರಿಗೆ ಪ್ರಯೋಜನಗಳನ್ನು ಒದಗಿಸಿದೆ. ಇದರಿಂದ ಸರ್ಕಾರ ಬಡವರು ದಲಿತರು ಹಿಂದುಳಿದವರು ಹಾಗೂ ಮಹಿಳೆಯರ ಪರವಾಗಿ ನಿಂತಿದೆ ಎಂಬುದು ಸಾಬೀತಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ತನ್ವೀರ್ ಸೇಠ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಪ್ರಾದೇಶಿಕ ಆಯುಕ್ತರಾದ ಬಿ ಜಿ ಪ್ರಕಾಶ್, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎಂ ಗಾಯತ್ರಿ ಅವರು ಸೇರಿದಂತೆ ಮತ್ತಿತರು ಉಪಸ್ಥಿರಿದ್ದರು.