ಪ್ರತಾಪ್ ಸಿಂಹ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಬಿಜೆಪಿ ರಾಜ್ಯಧ್ಯಕ್ಷರಿಗೆ ಮನವಿ ಸಲ್ಲಿಸಿದ ಮುಖಂಡರು
ಮೈಸೂರು: ಬಿಜೆಪಿ ಪಕ್ಷದಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಉಚ್ಚಾಟನೆ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಎಸ್ ಟಿ ಮೊರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಮೈ.ಕಾ.ಪ್ರೇಮ್ ಕುಮಾರ್ ಹಾಗೂ ಬಿಜೆಪಿ ಮುಖಂಡ ಕುಮಾರ್ ಗೌಡ ಎಂಬವರು ಮನವಿ ಸಲ್ಲಿಸಿದರು.
ಮೈಸೂರಿಗೆ ಶುಕ್ರವಾರ ಆಗಮಿಸಿದ್ದ ಬಿ.ವೈ.ವಿಜಯೇಂದ್ರ ಅವರನ್ನ ಭೇಟಿಯಾದ ಮೈ.ಕಾ.ಪ್ರೇಮ್ ಕುಮಾರ್ ಹಾಗೂ ಕುಮಾರ್ ಗೌಡ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಾವು ಭಾರತೀಯ ಜನತಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಮತ್ತು ಬ್ಲಾಕ್ ಮಟ್ಟದ, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಂದಾಗಿ ಪಕ್ಷಕ್ಕೆ ಉಂಟಾಗುತ್ತಿರುವ ಹಾನಿ ಮತ್ತು ಮುಜುಗರ ನಮಗೆ ತೀವ್ರ ಬೇಸರವನ್ನು ಉಂಟು ಮಾಡಿವೆ. ಪ್ರತಾಪ್ ಸಿಂಹ ಅವರು ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ದಾಳಿ ನಡೆಸಿದವರಿಗೆ ಯಾವುದೇ ಪೂರ್ವಾಪರ ಪರಿಶೀಲಿಸದೆ ಒಳಗೆ ಪ್ರವೇಶಿಸಲು ಪಾಸ್ ನೀಡಿರುವುದು ದೇಶದ ಭದ್ರತಾ ವ್ಯವಸ್ಥೆಯನ್ನೇ ಆಣಕಿಸಿದ್ದಷ್ಟೇ ಅಲ್ಲದೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಸಮಸ್ತ ಕರ್ನಾಟಕದ ಜನತೆ ತಲೆ ಎತ್ತಿ ನಡೆಯಲು ಸಾಧ್ಯವಾಗದಷ್ಟು ಮುಜುಗರವನ್ನು ಸೃಷ್ಟಿಸಿತ್ತು. ಆ ಪ್ರಕರಣದ ತನಿಖೆ ಇಂದಿಗೂ ಕೂಡ ನಡೆಯುತ್ತಿದ್ದು ಪಾಸ್ ನೀಡಿಕೆಯ ಆರೋಪ ಹೊತ್ತಿರುವ ಪ್ರತಾಪ್ ಸಿಂಹ ಅವರ ತಲೆಯ ಮೇಲೆ ತೂಗುಗತ್ತಿ ಇಂದಿಗೂ ಬದಿಗೆ ಸರಿದಿಲ್ಲ. ಹೀಗಾಗಿ ಸಂಸತ್ ಭವನದ ದಾಳಿಯ ತನಿಖೆ ಮುಗಿಯುವವರೆವಿಗೂ ಪ್ರತಾಪ ಸಿಂಹ ಅವರಿಗೆ ಪಕ್ಷದ ಯಾವುದೇ ಉನ್ನತ ಹುದ್ದೆ ನೀಡಬಾರದು. ಪ್ರತಾಪ ಸಿಂಹ ಅವರನ್ನು ಉಚ್ಚಾಟನೆ ಮಾಡಬೇಕೆಂದು ಕೇಂದ್ರ ಭಾರತೀಯ ಜನತಾ ಪಾರ್ಟಿಗೆ ಶಿಫಾರಸು ಮಾಡಬೇಕೆಂದು ಮೈ.ಕಾ.ಪ್ರೇಮ್ ಕುಮಾರ್ ಹಾಗೂ ಕುಮಾರ್ ಗೌಡ ಮನವಿ ಮಾಡಿದ್ದಾರೆ.