ನಕಲಿ ಫೋಟೋ ವೈರಲ್: ಪ್ರಶಾಂತ್ ಸಂಬರಗಿ ವಿರುದ್ಧ ಪ್ರಕಾಶ್ ರಾಜ್ ದೂರು; ಪ್ರಕರಣ ದಾಖಲು

Prakash Raj (Photo credit: wikipedia)
ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ತನ್ನ ನಕಲಿ ಫೊಟೋ ವೈರಲ್ ಮಾಡುತ್ತಿರುವ ಬಗ್ಗೆ ಖ್ಯಾತ ನಟ ಪ್ರಕಾಶ್ ರಾಜ್ ಅವರು ಪ್ರಶಾಂತ್ ಸಂಬರಗಿ ವಿರುದ್ಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಶನಿವಾರ ಬೆಳಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ಪ್ರಶಾಂತ್ ಸಂಬರಗಿ ನನ್ನ ಖ್ಯಾತಿಗೆ ಕುತ್ತು ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಫೇಸ್ ಬುಕ್ ನಲ್ಲಿ ನನ್ನ ಹೆಸರನ್ನು ಬಳಸಿ AI ಬಳಸಿ ಸೃಷ್ಟಿಸಿದ ಫೋಟೋವನ್ನು ಬಳಸಿದ್ದು, ಸುಳ್ಳು ಶೀರ್ಷಿಕೆ ನೀಡಿದ್ದಾರೆ' ಎಂದು ದೂರಿನಲ್ಲಿ ಪ್ರಕಾಶ್ ರಾಜ್ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಶಾಂತ್ ಸಂಬರಗಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
'ಪ್ರಶಾಂತ್ ಸಂಬರಗಿ ನಟಿಯರೂ ಸೇರಿದಂತೆ ಅನೇಕರಿಗೆ ಈ ರೀತಿ ತೊಂದರೆ ನೀಡಿದ್ದು, ಆತನಿಗೆ ಪಾಠ ಕಲಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹರಡುವವರಿಗೂ ಇದೊಂದು ಪಾಠವಾಗವೇಕು ಎಂಬ ಕಾರಣಕ್ಕೆ ದೂರು ನೀಡಿದ್ದೇನೆ' ಎಂದು ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ