ಸಂಸದ ಪ್ರತಾಪ್ ಸಿಂಹ ಕಚೇರಿಗೆ ರೈತರಿಂದ ಮುತ್ತಿಗೆ ಯತ್ನ: ಪೊಲೀಸರು ರೈತರ ನಡುವೆ ಮಾತಿನ ಚಕಮಕಿ
ಮೈಸೂರು : ರೈತರ ಮೇಲಿನ ಕೇಂದ್ರ ಸರಕಾರದ ದೌರ್ಜನ್ಯ ಖಂಡಿಸಿ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ರೈತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್ ಗಳನ್ನು ಅಡ್ಡ ಹಾಕಿ ತಡೆದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ನೀವು ನಮ್ಮನ್ನು ಏಕೆ ತಡೆಯುತ್ತಿದ್ದೀರಿ. ನಮ್ಮ ಕ್ಷೇತ್ರದ ಸಂಸದರನ್ನು ನಾವು ಭೇಟಿ ಮಾಡಿ ರೈತರ ಸಮಸ್ಯೆ ಕುರಿತು ಒತ್ತಾಯಿಸಲು ಬಂದಿದ್ದೇವೆ. ನಾವು ಬರುತ್ತೇವೆ ಎಂದು ಗೊತ್ತಿದ್ದರೂ ಸಹ ರೈತರಿಗೆ ಹೆದರಿ ಸಂಸದರು ಕಾಣೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಸಂಸದರು, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಬಂದ ಸಂಸದರ ಆಪ್ತ ಸಹಾಯಕ ನಿಮ್ಮ ಮನವಿಯನ್ನು ಸ್ವೀಕರಿಸಿ ಸಂಸದರಿಗೆ ತಲುಪಿಸುತ್ತೇನೆ ಎಂದು ಮನವಿ ಮಾಡಿಕೊಂಡರು. ನಂತರ ಅವರಿಗೆ ಎಚ್ಚರಿಕೆ ನೀಡಿ ರೈತರು ಒತ್ತಾಯ ಪತ್ರವನ್ನು ಪ್ರಧಾನ ಮಂತ್ರಿಗಳ ಗಮನಕ್ಕೆ ತುರ್ತಾಗಿ ತಲುಪಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಪಂಜಾಬ್, ಹರ್ಯಾಣ ರಾಜ್ಯಗಳ ರೈತರ ಮೇಲೆನ ಪೊಲೀಸ್ ದೌರ್ಜನ್ಯ ನಿಲ್ಲಲಿ, ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಯಾಗಲಿ. ದೇಶದ ರೈತರ ಪರವಾಗಿ ಹೋರಾಟ ಮಾಡುತ್ತಿರುವ ಪಂಜಾಬ್ ಹರ್ಯಾಣ ರಾಜ್ಯಗಳ ರೈತರು, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರೈತರ ಮೇಲೆ ಕೇಂದ್ರ ಸರಕಾರ ಪೊಲೀಸ್ ದೌರ್ಜನ್ಯ ಮೂಲಕ ರೈತರ ಕೊಲೆ ಮಾಡುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚಳುವಳಿ ಮಾಡಲು ದಿಲ್ಲಿಗೆ ಬರುತ್ತಿದ್ದ ರೈತರನ್ನು ಗಡಿಭಾಗದಲ್ಲಿ ಉಗ್ರಗಾಮಿಗಳು, ವಿದೇಶಿ ಶಕ್ತಿಗಳನ್ನು ನಿಗ್ರಹಿಸುವ ರೀತಿಯಲ್ಲಿ ದೇಶದ ರೈತರನ್ನು ಬಗ್ಗು ಬಡಿಯಲು ವಾಮ ಮಾರ್ಗದ ಮೂಲಕ ಪ್ರಯತ್ನಿಸುತ್ತಿದೆ ,ಇದು ಖಂಡನೀಯ ಎಂದರು.
ಪೊಲೀಸರ ದಾಳಿಯಿಂದ ರೈತರು ಸಾಯುತ್ತಿದ್ದಾರೆ ಇದು ಕೂಡಲೇ ನಿಲ್ಲಬೇಕು. ಅಧಿಕಾರ ಬಲದಿಂದ ರೈತರ ಚಳುವಳಿಯನ್ನು ನಾಶ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ 70ರಷ್ಟು ರೈತರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಸರಕಾರದ ಮುಂದೆ ಬಿಕ್ಷೆ ಕೇಳುತ್ತಿಲ್ಲ, ನ್ಯಾಯ ಕೇಳುತ್ತಿದ್ದೇವೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಇಡೀ ದೇಶದ ರೈತರು ಬೀದಿ ಬೀದಿಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ನಿಮ್ಮ ಮಂತ್ರಿಗಳಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ , ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ಮುಖಂಡರಾದ ಹೆಗ್ಗೂರು ರಂಗರಾಜ್, ಅಂಬಳೆ ಮಂಜುನಾಥ್, ಕಾಟೂರು ಮಾದೇವಸ್ವಾಮಿ, ಶ್ರೀಕಂಠ, ಚುಂಚುರಾಯನಹುಂಡಿ ಗಿರೀಶ್, ಸಿದ್ದರಾಮ, ಕೂಡನಹಳ್ಳಿ ಸೋಮಣ್ಣ, ಗಣೇಶ್, ಮಾರ್ಬಳ್ಳಿ ಬಸವರಾಜು, ಹಿರೇನಂದಿ ಮಹಾದೇವಪ್ಪ, ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ, ಮಹೇಶ್, ಕರುವಟ್ಟಿ ಉಮೇಶ್, ಯಾಕ ನೂರು ಚಂದ್ರ, ಮಲ್ಲೇಶ್, ಕುಪ್ಪೆ ಮಾದೇವ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.