ರಾಜ್ಯಪಾಲರ ನೋಟಿಸ್ ಕಾನೂನುಬಾಹಿರ, ಸಂವಿಧಾನದ ಕೊಲೆ, ಪ್ರಜಾಪ್ರಭುತ್ವದ ನಾಶ: ಸಿದ್ದರಾಮಯ್ಯ
ಮೈಸೂರು, ಆ.2: ರಾಜ್ಯಪಾಲರು ಕೊಟ್ಟಿರುವ ಶೋಕಾಸ್ ನೋಟಿಸ್ ಕಾನೂನುಬಾಹಿರ, ಇದು ಸಂವಿಧಾನದ ಕೊಲೆ, ಪ್ರಜಾಪ್ರಭುತ್ವ ನಾಶ ಮಾಡುವ ಕ್ರಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಡಗು-ಮೈಸೂರು ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ತೆರಳಲು ಶುಕ್ರವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಮುಡಾ ವಿಚಾರದಲ್ಲಿ ನನ್ನ ಪಾತ್ರ ಇಲ್ಲ. ಶೋಕಾಸ್ ನೋಟಿಸ್ ಕೊಟ್ಟಿರುವುದು ಕಾನೂನುಬಾಹಿರ, ಸಂವಿಧಾನಕ್ಕೆ ವಿರುದ್ಧ, ಕೇಂದ್ರ ಸರ್ಕಾರದ ಕೈಗೊಂಬೆ ರೀತಿ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರಿಗೆ ದೂರು ನೀಡಿರುವ ಟಿ.ಜೆ.ಅಬ್ರಾಹಂ ಒಬ್ಬ ಬ್ಲಾಕ್ ಮೇಲರ್. ಈತ ಹಲವಾರು ಜನರಿಗೆ ನೋಟಿಸ್ ಕೊಟ್ಟು ಬ್ಲಾಕ್ ಮೇಲ್ ಮಾಡಿದ್ದಾನೆ. ಈತನ ದೂರನ್ನು ಪರಿಗಣಿಸಿ ರಾಜ್ಯಪಾಲರು ನೋಟಿಸ್ ಮಾಡಿರುವುದು ಕಾನೂನು ಬಾಹಿರ. ತಪ್ಪೇ ಮಾಡಿಲ್ಲ ಎಂದ ಮೇಲೆ ನೋಟಿಸ್ ಕೊಡುವುದು ತಪ್ಪಲ್ಲವೇ ಎಂದು ಪ್ರಶ್ನಿದರು.
ಟಿ.ಜೆ.ಅಬ್ರಹಾಂ ಜು.26 ರಂದು ಪೂ.11 ಗಂಟೆಗೆ ರಾಜ್ಯಪಾಲರಿಗೆ ದೂರು ನೀಡುತ್ತಾನೆ. ಅವತ್ತೇ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಡುತ್ತಾರೆ. ಒಬ್ಬ ಸಂವಿಧಾನಾತ್ಮಕವಾಗಿ ಜನರಿಂದ ನೇರವಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿಗೆ ನೋಟಿಸ್ ಕೊಡುವ ಮುನ್ನ ಆತನ ದೂರನ್ನು ಕೂಲಂಕಷವಾಗಿ ಪರಿಗಣಿಸಬೇಕಿತ್ತು. ಅದು ಬಿಟ್ಟು ಅಂದೇ ರಾತ್ರಿ 10 ಗಂಟಗೆ ನಮ್ಮ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ಪ್ರಭುಶಂಕರ್ ಎನ್ನುವವರು ದೂರವಾಣಿ ಕರೆ ಮಾಡಿ ಶೋಕಾಸ್ ನೋಟಿಸ್ ಸ್ವೀಕರಿಸುವಂತೆ ಹೇಳಿದ್ದಾರೆ. ಅಷ್ಟೊಂದು ಆತುರವಾಗಿ ನೋಟಿಸ್ ಕೊಡುವಂತಹ ಅಗತ್ಯ ಏನಿತ್ತು? ಇದೆನ್ನೆಲ್ಲಾ ನೋಡಿದರೆ ಇದು ಒಂದು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಎಂದು ಸಿಎಂ ಆರೋಪಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಜು.26 ರಂದು ಸಂಜೆ 6 ಗಂಟೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದನ್ನು ಅವರು ನೋಡಿಲ್ಲ. ಜೊತೆಗೆ ನ್ಯಾಯಾಂಗ ತನಿಖೆಯನ್ನು ನಡೆಸಲಾಗುತ್ತಿದೆ. ಅದರ ವರದಿಯೂ ಬಂದಿಲ್ಲ. ಆ ಎಲ್ಲಾ ವರದಿ ಬಂದು ತಪ್ಪು ಮಾಡಿದ್ದಾರೆ ಎನ್ನುವುದು ಕಂಡು ಬಂದರೆ ಇವರು ಕ್ರಮ ತೆಗೆದುಕೊಳ್ಳುವುದರಲ್ಲಿ ಅರ್ಥ ಇದೆ. ಅದು ಬಿಟ್ಟು ಏಕಾಏಕಿ ಶೋಕಾಸ್ ನೋಟಿಸ್ ನೀಡಿರುವುದು ಕಾನೂನಿಗೆ ವಿರುದ್ಧ. ರಾಜ್ಯಪಾಲರು ಕೇಂದ್ರ ಸರಕಾರದ ಜೊತೆಗೆ ಬಿಜೆಪಿ-ಜೆಡಿಎಸ್ ಕೈ ಗೊಂಬೆ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇವರದೇ ಪಕ್ಷದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧವೂ ಕ್ರಮಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ದೂರು ಬಂದು ವರ್ಷಗಟ್ಟಲೇ ಆದರು ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯಪಾಲರಿಗೆ ಸಲಹೆ ಕೊಡುವವರು ಕೌನ್ಸಿಲ್ ಮಿನಿಸ್ಟರ್ ಗಳು. ಕೆಟ್ಟ ಸಂಪ್ರದಾಯ ಆಗಬಾರದು ಎಂದು ನಾನು ನಿನ್ನೆ ನಡೆದ ಸಚಿವ ಸಂಪುಟ ಸಭೆಗೆ ಹೋಗಲಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶೋಕಾಸ್ ನೋಟಿಸ್ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದಾರೆ. ನೋಟಿಸ್ ಕಾನೂನುಬಾಹಿರ ಅದಕ್ಕಾಗಿ ಹಿಂಪಡೆಯಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹೆದರಿರುವುದು ನಾನಲ್ಲ, ಆರ್. ಅಶೋಕ್
ನಾನು ತಪ್ಪೇ ಮಾಡಿಲ್ಲ ಅಂತಹದರಲ್ಲಿ ರಾಜ್ಯಪಾಲರು ಕೊಟ್ಟಿರುವ ಶೋಕಾಸ್ ನೋಟಿಸ್ ಗೆ ಏಕೆ ಹೆದರಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯಪಾಲರು ಕಾನೂ ರೀತಿ ಕೆಲಸ ಮಾಡಿಲ್ಲ. ನಾನು ತಪ್ಪೇ ಮಾಡಿಲ್ಲ ನಾನು ಏಕೆ ಹೆದರಿಕೊಳ್ಳಲಿ. ವಿರೋಧ ಪಕ್ಷದ ನಾಯಕ ಅಶೋಕ್ ಹೆದರಿಕೊಂಡಿರುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಚ್.ಡಿ.ಕುಮಾರಸ್ವಾಮಿ ಕೇಂದ್ರದ ಮಂತ್ರಿ ಜೆಡಿಎಸ್ ನಾಯಕ. ಇವರು ಮುಡಾ ವಿಚಾರದಲ್ಲಿ ಏನು ಇಲ್ಲ. ಪಾದಯಾತ್ರೆ ಬೇಡ ಎನ್ನುತ್ತಾರೆ. ಮಳೆ ಆವಾಂತರದಲ್ಲಿ ಜನ ಸಂಕಷ್ಟಕ್ಕೀಡಾಗಿದ್ದಾರೆ ಎನ್ನುತ್ತಾರೆ. ಈಗ ಪಾದಯಾತ್ರೆ ಮಾಡುತ್ತೇನೆ ಎಂದರೆ ಇದಕ್ಕೆ ಏನನ್ನಬೇಕು. ಇದೆನ್ನೆಲ್ಲಾ ನೋಡಿದರೆ ಸ್ವ ಇಚ್ಛೆಯಿಂದ ಪಾದಯಾತ್ರೆ ಮಾಡುತ್ತಿಲ್ಲ ಎಂಬುದು ತಿಳಿಯುತ್ತಿದೆ ಎಂದು ಹೇಳಿದರು.
ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಕೆಲಸ ಮಾಡಲು ಸಚಿವರಿಗೆ ಸೂಚನೆ
ರಾಜ್ಯದಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ಪ್ರದೇಶಗಳಿಗೆ ತೆರಳಿ ಕೆಲಸ ಮಾಡುವಂತೆ ಸಚಿವರುಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಲ್ಲಿ ಮಳೆಯಿಂದ ಸಾಕಷ್ಟು ನಷ್ಟ ಉಂಟಾಗಿದೆ.ಇಂದು ನಾನು ಕೊಡಗು ಜಿಲ್ಲೆಗೆ ಭೇಟಿ ನೀಡಿ ಅವಲೋಕನ ಮಾಡಿ ಮಾಹಿತಿ ಪಡೆಯುತ್ತೇನೆ. ನಾಳೆ ನಂಜನಗೂಡು ತಾಲ್ಲೂಕಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆಯಿಂದ ಮನೆಗಳು ಬಿದ್ದಿವೆ, ಸೇತುವೆಗಳು, ರಸ್ತೆಗಳು ಹಾಳಾಗಿವೆ. ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಇದರ ಬಗ್ಗೆ ಎನ್.ಡಿ.ಆರ್.ಎಫ್. ಪ್ರಕಾರ ಯಾವ ರೀತಿ ಪರಿಹಾರ ಕೊಡಬೇಕು ಎಂಬುದನ್ನು ಸಚಿವ ಸಂಪುಟ ಸಭೆ ಕರೆದು ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.