ಮೈಸೂರು | ಪ್ರವಾಸಿ ಮಂದಿರದ ಬೀಗ ತೆಗೆಯದ ಅಧಿಕಾರಿಗಳು : ಎಚ್ಡಿಕೆಗೆ ಮುಜುಗರ
ಎಚ್.ಡಿ.ಕುಮಾರಸ್ವಾಮಿ | PC : PTI
ಮೈಸೂರು: ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ರಾಂತಿ ಪಡೆಯಲೆಂದು ನಂಜನಗೂಡು ಪ್ರವಾಸಿ ಮಂದಿರಕ್ಕೆ ಹೋಗಿದ್ದಾಗ ಪ್ರವಾಸಿ ಮಂದಿರದ ಕೊಠಡಿಗೆ ಬೀಗ ಹಾಕಿದ್ದ ಘಟನೆ ರವಿವಾರ ನಡೆದಿದೆ. ಬೀಗ ತೆಗೆಯದಿದ್ದರಿಂದ ಹತ್ತು ನಿಮಿಷ ಕಾದು ಕುಮಾರಸ್ವಾಮಿಯವರು ವಾಪಸ್ ಹೋಗಿದ್ದಾರೆ.
ನಂಜನಗೂಡು ಪ್ರವಾಸ ಕೈಗೊಂಡಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಭೇಟಿಯ ವಿಚಾರವನ್ನು ಅಧಿಕಾರಿಗಳಿಗೆ ಮೊದಲೇ ತಿಳಿಸಲಾಗಿತ್ತು. ಈ ಬಗ್ಗೆ ಪ್ರವಾಸ ಪಟ್ಟಿಯನ್ನು ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ್ದರು.
ನಂಜನಗೂಡು ಕಂಠೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಬಳಿಕ ಮೈಸೂರಿಗೆ ವಾಪಸ್ ತೆರಳಬೇಕಾದರೆ ನಂಜನಗೂಡು-ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗಾಗಿ ತೆರಳಿದ್ದಾರೆ. ಈ ವೇಳೆ ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು. 10 ನಿಮಿಷ ಕಾದರೂ ಬಾಗಿಲು ತೆಗೆಯಲು ಯಾವ ಸಿಬ್ಬಂದಿಗಳು ಬಂದಿಲ್ಲ. ಬಳಿಕ ಎಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ತೆರಳಿದರು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ :
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ನಂಜನಗೂಡಿನ ಸರ್ಕಾರಿ ಅತಿಥಿ ಗೃಹದಲ್ಲಿ ಲಘು ವಿಶ್ರಾಂತಿಗಾಗಿ ತೆರಳಿದಾಗ ಅತಿ ಥಿಗೃಹಕ್ಕೆ ಬೀಗ ಹಾಕಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ವಿಷಯದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕರ್ತವ್ಯ ಲೋಪದಡಿ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲು ಕ್ರಮ ಕೈಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.