ಬರೀ ಸುಳ್ಳುಗಳಿಂದ 10 ವರ್ಷ ಮುಗಿಸಿದ ಮೋದಿ ಯಾವ ಮುಖ ಹೊತ್ಕೊಂಡು ಮತ ಕೇಳ್ತಾರೆ?: ಸಿ.ಎಂ.ಸಿದ್ದರಾಮಯ್ಯ
ʼಬಿಜೆಪಿಗೆ ಒಂದು ಸೀಟನ್ನೂ ಕೊಡಬೇಡಿʼ
Photo:fb/Siddaramaiah
ಮೈಸೂರು ಏ 13: ಸುಳ್ಳು ಹೇಳಿದರೂ ಜನ ಮೋದಿ ಮೋದಿ ಅಂತಾರೆ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರು ಸುಳ್ಳು ಹೇಳೋದನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕೃಷ್ಣರಾಜದಲ್ಲಿ ನಡೆದ ಜನಧ್ವನಿ-2 ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ಹಾಕ್ತೀನಿ ಅಂದ್ರು, ವಿದೇಶದಿಂದ ಕಪ್ಪು ಹಣ ತರ್ತೀನಿ ಅಂದ್ರು, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ್ರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು, ಡೀಸೆಲ್- ಪೆಟ್ರೋಲ್-ಗ್ಯಾಸ್-ರಸಗೊಬ್ಬರದ ಬೆಲೆ ಕಡಿಮೆ ಮಾಡ್ತೀವಿ ಅಂದ್ರು, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸ್ತೀವಿ ಅಂದರು. ಹೀಗೆ ರಾಶಿ ರಾಶಿ ಸುಳ್ಳುಗಳ ಮೂಲಕವೇ ಭಾರತೀಯರನ್ನು ನಿರಂತರವಾಗಿ ಬಕ್ರಾ ಮಾಡಿ ವಂಚಿಸಿದರು. ಹತ್ತು ವರ್ಷಗಳ ಕಾಲ ನಿಮ್ಮನ್ನು ವಂಚಿಸಿದವರಿಗೇ ಮತ ಹಾಕೋಕೆ ನಿಮಗೆ ಮನಸ್ಸು ಬರುತ್ತಾ ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದವರು ಯಾರು, ಮಹಿಳಾ-ಮಕ್ಕಳ ಆಸ್ಪತ್ರೆ ಮಾಡಿದವರು ಯಾರು, ಶಾಲೆ-ಹಾಸ್ಟೆಲ್ ಗಳನ್ನು ಮಾಡಿದವರು ಯಾರು, ಮೈಸೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಕೊಟ್ಟ ಸರ್ಕಾರ ಯಾವುದು ಎನ್ನುವುದು ಮೈಸೂರಿನ ಪ್ರತಿ ಪ್ರಜ್ಞಾವಂತರಿಗೂ ಗೊತ್ತು. ನಾವು ಮಾಡಿದಷ್ಟು ಕೆಲಸವನ್ನು ಮಾಡಲು ಬಿಜೆಪಿಗೂ ಅವಕಾಶ ಇತ್ತು. ಜನ ಅವಕಾಶ ಕೊಟ್ಟಿದ್ದರು. ಆದರೆ ಈ ಅವಕಾಶ ಸಿಕ್ಕಾಗ ಬಿಜೆಪಿ ಸಂಸದರು ಕೆಲಸ ಮಾಡಲಿಲ್ಲ. ಹೀಗಾಗಿ ನುಡಿದಂತೆ ನಡೆದು ಅಭಿವೃದ್ಧಿಯ ದಿಕ್ಕಲ್ಲಿ ಮುನ್ನುಗ್ಗುತ್ತಿರುವ ನಮಗೆ ಅವಕಾಶ ಕೊಡಿ. ಸಾಮಾನ್ಯ ಕಾರ್ಯಕರ್ತರಾಗಿ ಹೋರಾಟ, ಪ್ರತಿಭಟನೆಗಳಿಂದ ಬೆಳೆದ ಎಂ.ಲಕ್ಷ್ಮಣ್ ಅವರನ್ನು ಈ ಬಾರಿ ಗೆಲ್ಲಿಸಿ ಎಂದು ಕರೆ ನೀಡಿದರು.
ಬಿಜೆಪಿಗೆ ಮೈಸೂರು-ಕೊಡಗಿನ ಜನತೆ ಅವಕಾಶ ಕೊಟ್ಟಾಗ ಬಿಜೆಪಿ ಸಂಸದರು, ಶಾಸಕರು,ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲಿಲ್ಲ. ಈಗ ಕೇವಲ ಅಭ್ಯರ್ಥಿಯನ್ನು ಬದಲಾಯಿಸಿ ಮತ ಕೇಳುತ್ತಿದ್ದಾರೆ. ಇದು ಹೊಣೆಗೇಡಿತನ ಅಲ್ಲವೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಬಡವರು, ದುಡಿಯವ ವರ್ಗಗಳ ಪರವಾಗಿ, ಮಹಿಳೆಯರ ಪರವಾಗಿ ಮಾಡಿದ ಒಂದೇ ಒಂದು ಕೆಲಸ ಯಾರಿಗಾದರೂ ಗೊತ್ತಾ? ಕೇವಲ ಸುಳ್ಳುಗಳನ್ನು ಸೃಷ್ಟಿಸಿ, ಭಾವನಾತ್ಮಕವಾಗಿ ಕೆರಳಿಸದವರಿಗೆ ಮತ ಹಾಕಿದರೆ ನೀವು ಮೋಸಹೋದಂತೆ ತಾನೇ ಎಂದು ಪ್ರಶ್ನಿಸಿದರು.
ನಾಳೆ ಮೈಸೂರಿಗೆ ಬರುತ್ತಿರುವ ಮೋದಿಯವರು ಯಾವ ಮುಖ ಇಟ್ಟುಕೊಂಡು ಮತ ಕೇಳ್ತಾರೆ. ಮೋದಿಯವರಾಗಲೀ, ಇವರ ಸಂಸದರಾಗಲೀ ಮೈಸೂರಿಗೆ ಏನು ಕೆಲಸ ಮಾಡಿದ್ದಾರೆ ತೋರಿಸಲಿ. ಬರೀ ಸುಳ್ಳುಗಳ ಸವಾರಿ ಮಾಡಿಕೊಂಡು 10 ವರ್ಷ ಮುಗಿಸಿದ್ರು, ಹೀಗಿದ್ದಾಗ ಮೋದಿಯವರು ಯಾವ ಮುಖ ಹೊತ್ಕೊಂಡು ರಾಜ್ಯಕ್ಕೆ ಬರ್ತಾರೆ? ಯಾವ ಮುಖ ಹೊತ್ತಕೊಂಡು ಮತ ಕೇಳ್ತಾರೆ ಎಂದು ಪ್ರಶ್ನಿಸಿದರು.
ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮ ಕೊಟ್ಟರು. ಮೋದಿ ಒಂದಂಶದ ಕಾರ್ಯಕ್ರಮವನ್ನೂ ಕೊಡಲಿಲ್ಲ. ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್. ಬಡತನ ನಿರ್ಮೂಲನೆಗೆ ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದರು. ಕೇವಲ ಅತ್ಯಂತ ಶ್ರೀಮಂತರಿಗಾಗಿ ಕೆಲಸ ಮಾಡಿದ ಮೋದಿ ಬಡವರಿಗಾಗಿ, ಬಡತನ ಹೋಗಲಾಡಿಸಲು ಒಂದಂಶದ ಕಾರ್ಯಕ್ರಮವನ್ನೂ ಏಕೆ ಕೊಡಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಬಿಜೆಪಿಗೆ ಒಂದೂ ಸೀಟು ಕೊಡಬೇಡಿಎಂದು ಕರೆ ನೀಡಿದರು.