ಬಿಜೆಪಿಯವರ ಎಲ್ಲಾ ಸುಳ್ಳುಗಳನ್ನು ಎದುರಿಸುವ ಧೈರ್ಯ ನನಗಿದೆ: ಸಿಎಂ ಸಿದ್ದರಾಮಯ್ಯ
"ಆ.9 ಜನಾಂದೋಲನದಲ್ಲಿ ಬಿಜೆಪಿಯ ಭ್ರಷ್ಟಾಚಾರ, ಬಿಎಸ್ ವೈ, ವಿಜಯೇಂದ್ರ ವಿರುದ್ಧದ ಪ್ರಕರಣ ಬಿಚ್ಚಿಡುವೆ"
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಬೆಳಗ್ಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಮೈಸೂರು: ಬಿಜೆಪಿಯವರ ಎಲ್ಲಾ ಸುಳ್ಳುಗಳನ್ನು ಎದುರಿಸುವ ಧೈರ್ಯ ನನಗಿದೆ. ಅವರ ಕಾಲದಲ್ಲಿ ನಡೆದಿರುವ ಎಲ್ಲಾ ಭ್ರಷ್ಟಾಚಾರಗಳು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಬಿ.ವೈ.ವಿಜಯೇಂದ್ರರ ಪ್ರಕರಣಗಳನ್ನು ಆ.9ರ ಜನಾಂದೋಲನಾ ಸಮಾವೇಶದಲ್ಲಿ ರಾಜ್ಯದ ಜನತೆಯ ಮುಂದೆ ಬಿಚ್ಚಿಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ನಗರದ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪ್ರಯತ್ನಪಟ್ಟರು ಅದು ಆಗಲಿಲ್ಲ, ಹಾಗಾಗಿ ಬಿಜೆಪಿ-ಜೆಡಿಎಸ್ ಒಂದಾಗಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂದು ಮುಡಾ ವಿಚಾರ ಮುಂದೆ ತಂದು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನನ್ನು ಕಂಡರೆ ಬಿಜೆಪಿ ಅವರಿಗೆ ವೈಯಕ್ತಿಕವಾಗಿ ಭಯ ಇಲ್ಲ, ಆದರೆ ನಾನು ಬಡವರು, ದಲಿತರು, ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತೇನೆ ಎಂಬ ಭಯ ಅವರಿಗಿದೆ. ಗ್ಯಾರಂಟಿ ಯೋಜನೆಗಳನ್ನು ತಡೆದುಕೊಳ್ಳಲು ಆವರಿಗೆ ಆಗುತ್ತಿಲ್ಲ. ಬಿಜೆಪಿಯವರು ಗ್ಯಾರಂಟಿ ಯೋಜನೆಗೆ ವಿರುದ್ಧವಾಗಿರುವವರು. ಈ ಯೋಜನೆ ಜಾರಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರೇ ಅದನ್ನು ಜಾರಿಗೊಳಿಸಲು ಆಗದು ಎಂದು ಹೇಳಿದ್ದರು. ಜಾರಿ ಮಾಡಿದರೂ ಹೆಚ್ಚು ದಿನ ನಡೆಸಲು ಆಗಲ್ಲ ಎಂದಿದ್ದರು. ಈಗ ಒಂದು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದೇವೆ. ಅದನ್ನು ತಡೆದುಕೊಳ್ಳಲು ಇವರಿಗೆ ಆಗುತ್ತಿಲ್ಲ ಎಂದು ತಿರುಗೇಟು ನೀಡಿದರು.
ನಾನು ಸಿಎಂ ಇದ್ದಾಗಲೇ ಪತ್ನಿ ಅರ್ಜಿ ಕೊಟ್ಟಿದ್ದರು
2014ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನನ್ನ ಪತ್ನಿ, ಮುಡಾ ಅಕ್ರಮವಾಗಿ ನಮ್ಮ ಜಮೀನು ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಳು. ಆ ಸಂದರ್ಭದಲ್ಲಿ ನಾನು ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ನಾನು ಸಿಎಂ ಆಗಿರುವವರೆಗೆ ಒಂದು ಗುಂಟೆಯನ್ನು ನೀಡಬಾರದು ಎಂದು ಸೂಚಿಸಿದ್ದೆ. ನಾನು ಮಾಡಬೇಕಿಂದಿದ್ದರೆ ಆಗಲೇ ಮಾಡಲು ಆಗುತ್ತಿರಲಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯಪಾಲರು ಒಪ್ಪಿಕೊಳ್ಳುವ ನಂಬಿಕೆ ಇದೆ:
ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ನೋಟಿಸ್ ಗೆ ಈಗಾಗಲೇ ಉತ್ತರ ನೀಡಲಾಗಿದ್ದು, ಅದನ್ನು ರಾಜಪಾಲರು ಒಪ್ಪಿಕೊಳ್ಳುವ ನಂಬಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
ಮುಡಾ ವಿಷಯದಲ್ಲಿ ಸಂಪೂರ್ಣವಾಗಿ ಕಾನೂನು ಪ್ರಕಾರ ನಡೆದಿರುವುದರಿಂದ ರಾಜ್ಯಪಾಲರು ಸರ್ಕಾರದ ಉತ್ತರವನ್ನು ಒಪ್ಪಿಕೊಳ್ಳುವ ನಂಬಿಕೆಯಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಪ್ರಭಾವವನ್ನು ನಾನು ಬೀರಿಲ್ಲ. ಕಾನೂನು ಪ್ರಕಾರವಾಗಿರುವ ಹಿನ್ನೆಲೆಯಲ್ಲಿಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರಲ್ಲಿ ನನ್ನ ಪತ್ನಿಗೆ ಬದಲಿ ನಿವೇಶನ ನೀಡಲಾಗಿದೆ ಎಂದು ಅವರು ಹೇಳಿದರು.