ಮೈಸೂರು| ರಾತ್ರೋ ರಾತ್ರಿ ಗನ್ ಹೌಸ್ ವೃತ್ತದಲ್ಲಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆ ಪ್ರತಿಷ್ಠಾಪನೆ
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ವಿರೋಧ
ಮೈಸೂರು,ಡಿ.9: ನಗರದ ಅರಮನೆ ಮುಂಭಾಗವಿರುವ ಗನ್ ಹೌಸ್ ವೃತ್ತದಲ್ಲಿ ಶುಕ್ರವಾರ ರಾತ್ರಿ ದಿಢೀರನೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ವೇಳೆ ಪರ ವಿರೋಧ ವ್ಯಕ್ತವಾಗಿದೆ.
ಕಳೆದ 6 ವರ್ಷಗಳ ಹಿಂದೆ ರಾಜೇಂದ್ರ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆ ವೇಳೆ ವಿರೋಧ ವ್ಯಕ್ತವಾಗಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಹೈಕೋರ್ಟ್ ನಿಂದ ರಚನೆಯಾದ ಜಿಲ್ಲಾ ಮಟ್ಟದ ಸಮಿತಿ ಸಮ್ಮತಿ ಸೂಚಿಸಿದ ಮೇಲೆ ಶುಕ್ರವಾರ ರಾತ್ರಿ ಕ್ರೇನ್ ಮೂಲಕ ರಾಜೇಂದ್ರ ಸ್ವಾಮಿಜಿಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.
ಈ ವೇಳೆ ಅರಸು ಮಂಡಳಿ ಮತ್ತು ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಮತ್ತೊಂದೆಡೆ ರಾಜೇಂದ್ರ ಸ್ವಾಮೀಜಿಗಳ ಪರ ಇರುವ ಗುಂಪು ರಾಜೇಂದ್ರ ಸ್ವಾಮೀಜಿಗಳ ಪರ ಘೋಷಣೆ ಕೂಗಿದರು. ಈ ವೇಳೆ ಎರಡು ಗುಂಪುಗಳ ನಡುವೆ ಪರ ವಿರೋಧ ವ್ಯಕ್ತವಾಯಿತು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನು ಸ್ಥಳದಿಂದ ಚದುರಿಸಿದರು.
ರಾಜೇಂದ್ರ ಸ್ವಾಮೀಜಿ ಪ್ರತಿಮೆ ಸ್ಥಾಪನೆಗೆ ರಾಜವಂಶಸ್ಥೆ ವಿರೋಧ:
ಶುಕ್ರವಾರ ತಡರಾತ್ರಿ ತಲೆ ಎತ್ತಿರುವ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆ ನಿರ್ಮಾಣಕ್ಕೆ ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಸ್ವತಃ ಪತ್ರ ಬರೆದಿರುವ ಅವರು, ಮೈಸೂರಿನ ಗನ್ ಹೌಸ್ ಬಳಿ ತಡರಾತ್ರಿ ಕ್ರೇನ್ ಉಪಯೋಗಿಸಿ ಪ್ರತಿಮೆ ಸ್ಥಾಪಿಸಲು ಮುಂದಾಗಿರುವ ವಿಷಯ ಅತ್ಯಂತ ದುರದೃಷ್ಟಕರ ಸಂಗತಿ. ಈ ಕುರಿತು ಪ್ರಬುದ್ಧ ಸಂಸ್ಥೆಯಿಂದ ಇಂತಹ ಘಟನೆ ನಿಜಕ್ಕೂ ಸಮಂಜಸವಲ್ಲ. ಉದ್ದೇಶಿತ ಪ್ರತಿಮೆಯ ಸ್ಥಾಪನೆಗೆ ಸತತವಾಗಿ ಪ್ರತಿರೋಧ ತೋರಿದ ಸಾರ್ವಜನಿಕರಿಗೆ ಸ್ಪಂದಿಸಿ ಈ ಬಗ್ಗೆ ಪುನರ್ವಿಮರ್ಶೆ ಮಾಡಲು ಮನವಿ ಕೂಡ ತಲುಪಿಸಿ ನನ್ನ ಬೆಂಬಲ ಸೂಚಿಸಿರುವುದಾಗಿ ಸ್ವತಃ ಪ್ರಮೋದದೇವಿ ಒಡೆಯರ್ ಅವರು ಪತ್ರ ಬರೆದಿದ್ದಾರೆ.