ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದ ನ್ಯಾಯಾಂಗ ತನಿಖೆಗೆ ಜೆಡಿಎಸ್ ಕೋರ್ ಕಮಿಟಿ ಆಗ್ರಹ
ಮೈಸೂರು, ಮೇ.7: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣ, ಪೆನ್ ಡ್ರೈವ್ ಹಂಚಿರುವವರು, ಸಂತ್ರಸ್ತಳೆನ್ನಲಾದ ಮಹಿಳೆಯ ಅಪಹರಣ ಸೇರಿದಂತೆ ಇಡೀ ಪ್ರಕರಣದ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್.ಐ.ಟಿ. ಯಲ್ಲಿನ ಕೆಲವು ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಎಸ್.ಐ.ಟಿ ಬಳಸಿಕೊಂಡು ಜೆಡಿಎಸ್ ಮಕ್ಷ ಮತ್ತು ನಾಯಕರನ್ನು ಮುಗಿಸುವ ಷಡ್ಯಂತರ ನಡೆಯುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಕ್ರಮ ಆಗಲಿ, ಆದರೆ ಪೆನ್ ಡ್ರೈವ್ ಹಂಚಿ ಹೆಣ್ಣುಮಕ್ಕಳ ಮರ್ಯಾದೆ ತೆಗೆಯಲು ಕಾರಣರಾದವರು ಯಾರು ಎಂಬುದು ಬಹಿರಂಗವಾಗಬೇಕು, ವಕೀಲ ದೇವರಾಜೇಗೌಡ ಹೇಳಿದ ಹಾಗೆ ಡ್ರೈವರ್ ಕಾರ್ತಿಕ್ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಸ್ಪಷ್ಟವಾಗಿದೆ. ಆತ ಹೊರದೇಶಕ್ಕೆ ಹೋಗಲು ಡಿ.ಕೆ.ಶಿವಕುಮಾರ್ ಅವರೇ ಕಾರಣ. ಅಂತಹದರಲ್ಲಿ ನರೇಂದ್ರ ಮೋದಿಯನ್ನು ಏಕೆ ದೂಷಣೆ ಮಾಡುತ್ತಿದ್ದೀರಿ? ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ವಕೀಲ ದೇವರಾಜೇಗೌಡ ನಿನ್ನೆ ಸುದ್ದಿಗೋಷ್ಠಿಯಲ್ಲಿ ಎಲ್.ಆರ್.ಶಿವರಾಮೇಗೌಡ ದೂರವಾಣಿಯಲ್ಲಿ ಮಾತನಾಡಿ ಡಿ.ಕೆ.ಶಿವಕುಮಾರ್ ಅವರಿಗೂ ಫೋನ್ ಕೊಟ್ಟಿದ್ದರು ಎಂಬ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಸಿಬಿಐ ಗೆ ವಹಿಸಿದರೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಎಂಬ ಭಾವನೆ ಮೂಡುತ್ತದೆ. ಅದಕ್ಕೆ ಎಸ್.ಐ.ಟಿ ನೂ ಬೇಡ, ಸಿಬಿಐ ಯೂ ಬೇಡ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಸಚಿವ ಸ್ಥಾನದಿಂದ ವಜಾಗೊಳಿಸಿ:
ಹಾಸನದ ಪೆನ್ ಡ್ರೈವ್ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈವಾಡ ಇರುವುದು ಸ್ಪಷ್ಟವಾಗಿದೆ. ಈ ವಿಚಾರವಾಗಿ ವಕೀಲ ದೇವರಾಜೇಗೌಡ ಅವರು ಖಚಿತ ಪಡಿಸಿದ್ದಾರೆ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಆಗ್ರಹಿಸಿದರು.
ನಾಳೆ ರಾಜ್ಯಾದ್ಯಂತ ಜೆಡಿಎಸ್ ಧರಣಿ:
ಪೆನ್ ಡ್ರೈವ್ ಸೇರಿದಂತೆ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಮೇ 8ರಂದು ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ವತಿಯಿಂದ ಧರಣಿ ನಡೆಸಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪ ಬಂದಿರುವ ವ್ಯಕ್ತಿ ಮೇಲೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಿ. ಪ್ರಕರಣವನ್ನು ಎಸ್.ಐ.ಟಿ.ಗೆ ವಹಿಸಿದ ಮೇಲೆ ಅಪಹರಣ ಕೇಸ್ ದಾಖಲಾಗುತ್ತದೆ. ರಾಜ್ಯ ಸರ್ಕಾರದ ಅಣತಿಯಂತೆ ಯಾರನ್ನು ಎ1 ಮಾಡಬೇಕು ಇನ್ಯಾರನ್ನು ಎ2 ಮಾಡಬೇಕು ಎಂಬುದು ನಿರ್ಧಾರವಾಗುತ್ತದೆ ಎಂದರು.
ಅಪಹರಣದ ಮಹಿಳೆ ಹುಣಸೂರಿನ ರಾಜಗೋಪಾಲ್ ಅವರ ತೋಟದಲ್ಲಿ ಪತ್ತೆಯಾದರು ಎಂದು ಹೇಳಲಾಗುತ್ತಿದೆ. ಆದರೆ ಸಂತ್ರಸ್ತ ಮಹಿಳೆ ರಾಜಗೋಪಾಲ್ ತೋಟದಲ್ಲಿ ಇರಲಿಲ್ಲ, ಆಕೆ ಹುಣಸೂರು ನಗರದ ಕರಿಗೌಡ ಸ್ಟ್ರೀಟ್ ನ ಪವಿತ್ರಾ ಹರೀಶ್ ಮನೆಯಲ್ಲಿ ಇರುತ್ತಾರೆ. ಪವಿತ್ರಾ ಹರೀಶ್ ಸಂತ್ರಸ್ತ ಮಹಿಳೆಯ ಸಂಬಂಧಿಯಾಗಿದ್ದಾರೆ. ರಾಜಗೋಪಾಲ್ ಅವರ ತೋಟದಲ್ಲಿ ಸಂತ್ರಸ್ತ ಮಹಿಳೆಯನ್ನು ಕರೆದುಕೊಂಡು ಹೋಗಿರುವುದು ಸಾಬೀತಾದರೆ ನಾನು ನನ್ನ ಸಾರ್ವಜನಿಕ ಜೀವನ ಮತ್ತು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.
ಶಾಸಕ ರೇವಣ್ಣ ಬಂಧನಕ್ಕೂ ಮೊದಲು ರಾಷ್ಟ್ರೀಯ ಮಾಧ್ಯಮವೊಂದು ರೇವಣ್ಣ ಬಂಧನವಾಗುತ್ತದೆ ಎಂಬುದನ್ನು ಬಿತ್ತರಿಸುತ್ತದೆ. ನಂತರ ಬಂಧನವಾಗುತ್ತದೆ. ಮಹಿಳೆ ರಕ್ಷಣೆ ಮಾಡಿದ ವೀಡಿಯೋ ಯಾಕೆ ರಿಲೀಸ್ ಮಾಡಲಿಲ್ಲ? ರಕ್ಷಣೆ ಮಾಡಿದ ಮೇಲೆ ಮಹಿಳೆಯನ್ನು ಕಾನೂನು ಪ್ತಕಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕಿತ್ತು ಆದರೆ ಯಾಕೆ ಹಾಜರು ಪಡಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.
ಮಹಿಳೆ ಅಪಹರಣ ಕುರಿತು ಯಾರು ಭಾಗಿಯಾಗಿದ್ದಾರೆ. ಮಹಿಳೆಯ ಪುತ್ರನಿಗೆ ಎಷ್ಟು ಹಣ ಸಂದಾಯವಾಗಿದೆ. ಕಂಪ್ಲೇಟ್ ಬರೆದುಕೊಟ್ಟವರು ಯಾರು? ಎಲ್ಲಿ ಬರೆದುಕೊಟ್ಟರು. ಎಲ್ಲದರ ಬಗ್ಗೆಯೂ ತನಿಖೆಯಾಗಬೇಕು. ಚುನಾವಣೆಗೆ ಎರಡು ದಿನ ಇದೆ ಎನ್ನುವ ಹಾಗೆ ಪೆನ್ ಡ್ರೈವ್ ಹಂಚಿದವರು ಯಾರು? ಮೊಬೈಲ್ ಗಳಿಗೆ ವೀಡಿಯೋ ಬಿಟ್ಟವರು ಯಾರು? ತನಿಖೆಯಾಗಬೇಕು, ಹಾಗಾಗಿ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರುಗಳಾದ ಬೀಚನಹಳ್ಳಿ ಚಿಕ್ಕಣ್, ಕೆ.ಮಹದೇವ್, ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ವಕ್ತಾರ ರವಿಚಂದ್ರೇಗೌಡ, ನಗರ ಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ. ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.