ಕಾಂತರಾಜ್ ವರದಿ ಯಾವುದೋ ಆಫೀಸಿನಲ್ಲಿ ರಸ್ತೆಯಲ್ಲಿ ಕುಳಿತು ಮಾಡಿರುವುದಲ್ಲ: ಕೆ.ಎನ್.ಲಿಂಗಪ್ಪ ಸಮರ್ಥನೆ
ರಾಜ್ಯದ 1.35 ಲಕ್ಷ ಕುಟುಂಬಗಳನ್ನು ಭೇಟಿ ಮಾಡಿ ಸಿದ್ಧಪಡಿಸಿರುವ ವರದಿ
ಮೈಸೂರು: ಕಾಂತರಾಜ್ ಆಯೋಗದ ನೇತೃತ್ವದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಯಾವುದೋ ಒಂದು ಕಚೇರಿ ಅಥವಾ ರಸ್ತೆಯಲ್ಲಿ ಕುಳಿತು ಸಿದ್ಧಪಡಿಸಿದ ವರದಿಯಲ್ಲ, ಪ್ರತಿ ಮನೆಗೆ ಮನೆಗೆ ಭೇಟಿ ನೀಡಿ ರಾಜ್ಯದ 1.35 ಲಕ್ಷ ಕುಟುಂಬಗಳ ಸ್ಥತಿಗತಿಗಳನ್ನು ಅವಲೋಕಿಸಿ ಮಾಡಿರುವ ಸಮೀಕ್ಷೆ ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್.ಲಿಂಗಪ್ಪ ಪ್ರತಿಪಾದಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2013 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರು ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಬೇಕು ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ನೇತೃತ್ವದಲ್ಲಿ ಒಟ್ಟು ಐದು ಜನ ಸಮಿತಿ ಸದಸ್ಯರನ್ನು ನೇಮಕ ಮಾಡಿ ಜವಾಬ್ದಾರಿ ವಹಿಸಿದ್ದರು. ಅದರಂತೆ ಎಲ್ಲೂ ಲೋಪವಾಗದಂತೆ ವೈಜ್ಞಾನಿಕವಾಗಿ ಸಮೀಕ್ಷೆಯನ್ನು ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಮೀಕ್ಷೆ ಯಲ್ಲಿ 1,33,410 ಜನರ ಮೂಲಕ ಜಾತಿಗಣತಿ ಮಾಡಿಸಲಾಗಿದೆ. 22,289 ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. ಈ ಎಲ್ಲರಿಗೂ ಬೆಂಗಳೂರಿನಲ್ಲಿ 2500 ಮಂದಿಯಿಂದ ಮೂರು ದಿನಗಳ ತರಬೇತಿಯನ್ನು ನೀಡಿ ಯಾವ ರೀತಿ ಸಮೀಕ್ಷೆ ಮಾಡಬೇಕು. ಯಾವ ಕಾಲಂಗಳಲ್ಲಿ ಅವರ ಸ್ಥಿಗತಿಗಳನ್ನು ಬರೆಯಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಗಿತ್ತು ಅದರಂತೆ ಈ ಜಾತಿಗಣತಿ ನಡೆದಿದೆ ಎಂದು ಸಮರ್ಥಿಸಿಕೊಂಡರು.
ಆಯೋಗದ ಅಧ್ಯಕ್ಷರಾಗಲಿ ಸದಸ್ಯರಾಗಲಿ ಸಮೀಕ್ಷೆ ಮಾಡಲು ಮನೆಗಳಿಗೆ ಭೇಟಿ ನೀಡಿಲ್ಲ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಜಿ.ಪಂ. ಸಿಇಓ,ತಹಶೀಲ್ದಾರ್ ಸೇರಿದಂತೆ ಇತರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮನೆಯಲ್ಲಿ ಯಾರೂ ಇಲ್ಲ ಎಂದರೆ ಎರಡೆರಡು ಬಾರಿ ನಮ್ಮ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ನಾವು ಸಿದ್ಧಪಡಿಸಿದ್ದ 50 ಕಾಲಂ ಗಳಲ್ಲೂ ಮನೆಯ ಕುಟುಂಬದವರ ಮಾಹಿತಿ ಪಡೆದು ಅವರು ಯಾವ ಸ್ಥಿತಿಯಲ್ಲಿದ್ದಾರೆ. ಅವರ ಜಾತಿ ಯಾವುದು. ಆರ್ಥಿಕ ಸ್ಥಿತಿ ಹೇಗಿದೆ. ಶೈಕ್ಷಣಿಕವಾಗಿ ಯಾವ ಮಟ್ಟದಲ್ಲಿದ್ದಾರೆ ಎಂಬ ಅಂಶಗಳನ್ನು ದಾಖಲು ಮಾಡಿ ನಂತರ ಮನೆಯವರಿಗೆ ಎಲ್ಲಾ ಮಾಹಿತಿಯೂ ಸರಿಯಾಗಿದಿಯೇ ಎಂಬುದನ್ನು ತೋರಿಸಿ ಅವರ ಬಳಿ ಸಹಿಯನ್ನು ಪಡೆಯಲಾಗಿದೆ ಎಂದು ತಿಳಿಸಿದರು.
ನಾವು ಸಮೀಕ್ಷೆ ಮಾಡಿದ ಮೇಲೆ ರಾಜ್ಯದಲ್ಲಿ 1351 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.ಎಲ್ಲಾ ಅಂಕಿ ಅಂಶಗಳನ್ನು ಸಿದ್ಧಪಡಿಸಿ ಇದನ್ನು ಪ್ರಿಂಟ್ ಮಾಡಲು ಸರ್ಕಾರಿ ಮುದ್ರಣಾಲಯಕ್ಕೆ ಕೊಡಲಾಗಿತ್ತು. ಅಷ್ಟರೊಳಗೆ ನಮ್ಮ ಮೂರು ವರ್ಷದ ಅವಧಿ ಮುಗಿದು ಹೋಗಿತ್ತು. ವರದಿ ಬಾಕಿ ಇರುವ ಕಾರಣ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾಂತರಾಜ್ ಆಯೋಗವನ್ನು ಮರು ಮುಂದುವರಿಕೆ ಮಾಡಿದರು ಎಂದು ವಿವರಿಸಿದರು.