ಅತಿವೃಷ್ಟಿಯಿಂದ ಯಾವುದೇ ಪ್ರಾಣ, ಆಸ್ತಿ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಸೂಚನೆ
ಮೈಸೂರು : ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಅತಿವೃಷ್ಟಿಯಿಂದ ಯಾವುದೇ ಪ್ರಾಣ ಹಾಗೂ ಆಸ್ತಿ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಧಿಕಾರಿಗಳು ಹಾನಿಯನ್ನು ತಡೆಗಟ್ಟಲು ಸಜ್ಜಾಗಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಮಳೆಯಿಂದ ಪ್ರಾಣ ಹಾಗೂ ಆಸ್ತಿ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನೂ ಹೆಚ್ಚು ಮಳೆಯಾದರೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಗುರುತಿಸಿಕೊಂಡಿರಬೇಕು" ಎಂದು ಹೇಳಿದರು.
"ಕಂದಾಯ ಇಲಾಖೆಯು ಮಾತೃ ಇಲಾಖೆಯಾಗಿದ್ದು, ಕಂದಾಯ ಇಲಾಖೆಯಲ್ಲಿ ಹೆಚ್ಚು ಹೆಚ್ಚು ಅರ್ಜಿಗಳು ವಿಲೇವಾರಿ ಆಗಿದ್ದರೂ ಸಹ ಹೆಚ್ಚು ಬಾಕಿ ಕಂದಾಯ ಇಲಾಖೆಯಲ್ಲಿಯೇ ಇವೆ. ಕಾಲ ಕಾಲಕ್ಕೆ ಬರುವ ಹೊಸ ಹೊಸ ಯೋಜನೆಗಳ ಜಾರಿ ಜವಾಬ್ಧಾರಿ ಕಂದಾಯ ಇಲಾಖೆಯ ಮೇಲೆಯೇ ಬರುತ್ತದೆ. ಆದರೂ ಸಹ ಜನರು ಕಂದಾಯ ಇಲಾಖೆಯ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಜನರಿಗೆ ಸಕಾಲದಲ್ಲಿ ಕೆಲಸ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಇಲಾಖೆಯ ಪ್ರಮುಖ ಜವಾಬ್ಧಾರಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು" ಎಂದು ಸೂಚಿಸಿದರು.
ರಾಜ್ಯದಲ್ಲಿ 24 ಲಕ್ಷ ಮಲ್ಟಿ ಓನರ್ ಆರ್‌ಟಿಸಿಗಳು ಇವೆ. ಇದರಲ್ಲಿ 2 ಲಕ್ಷ ಸರಕಾರದ ಸ್ವತ್ತಿನ ಮಲ್ಟಿ ಓನರ್ ಆರ್ ಟಿಸಿಗಳು ಇವೆ. ಇವನ್ನೂ ಈ ಹಿಂದೆಯಿಂದಲೂ ಬಗೆಹರಿಸದೆ ಹಾಗೆ ಬಿಟ್ಟುಕೊಂಡು ಬಂದಿದ್ದೇವೆ. 50 ಲಕ್ಷ ಪ್ಲಾಟ್ ಗಳು ಕೃಷಿಯಿಂದ ಬೇರೆ ಉದ್ದೇಶಕ್ಕೆ ಕನ್ವರ್ಟ್ ಆಗಿದೆ. ಆದರೆ ದಾಖಲೆಗಳಲ್ಲಿ ಈಗಲೂ ಕೃಷಿ ಭೂಮಿ ಎಂದು ಇದೆ. ಇದು ಕಾಲ ಕಾಲಕ್ಕೆ ಬದಲಾವಣೆ ಆಗಿದ್ದರೆ ಈಗ ಒತ್ತಡ ಆಗುತ್ತಿರಲಿಲ್ಲ. ಆದ್ದರಿಂದ ಇದು ನಮ್ಮ ಜವಾಬ್ದಾರಿ ಆಗಿದ್ದು, ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು.
ಈಗಾಗಲೇ ಮಳೆಯಿಂದ 20 ಸಾವು ಸಂಬಂಧಿಸಿದೆ :
ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗುತ್ತದೆ. ಈಗಾಗಲೇ ಮಳೆಯಿಂದ 20 ಸಾವು ಸಂಬಂಧಿಸಿದೆ. ವಿಪತ್ತು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿ, ಸಾವು ನೋವುಗಳು ಆಗದಂತೆ ನೋಡಿಕೊಳ್ಳಬೇಕು. ಕಳೆದ ಬಾರಿ ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದೀರಿ. ಹಾಗೆಯೇ ಈಗ ಹೆಚ್ಚು ಮಳೆಯಿಂದ ಆಗುವ ಅನಾಹುತಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಇನ್ನೂ ಮುಂದೆ ವಿಪತ್ತಿನಿಂದ ಒಂದೇ ಒಂದು ಸಾವು ಆಗದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಶೇಕಡಾ 15ರಷ್ಟು ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳು ಮಾತ್ರ ಖಾಲಿ ಇವೆ. ಗ್ರಾಮ ಆಡಳಿತಾಧಿಕಾರಿಗಳು ವಿವಿದೆಡೆ ನಿಯೋಜನೆಯ ಮೇಲೆ ಇದ್ದರೆ, ಅವರನ್ನು ಮೂಲ ಹುದ್ದೆಗಳಿಗೆ ಜಿಲ್ಲಾಧಿಕಾರಿಗಳು ಕರೆಸಿಕೊಳ್ಳಿಬೇಕು. ಗ್ರಾಮ ಆಡಳಿತಾಧಿಕಾರಿಗಳನ್ನು ಅವರ ಮೂಲ ಕರ್ತವ್ಯಕ್ಕೆ ಕಳುಹಿಸಿ. ಈಗಾಗಲೇ 1000 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗೆ ಅಧಿಸೂಚನೆ ಹೊರಡಿಸಿದ್ದು, ನೇಮಕಾತಿ ಹಂತದಲ್ಲಿ ಇದೆ. 1000 ಹುದ್ದೆಗಳ ಭರ್ತಿಯಿಂದ ಹುದ್ದೆಗಳ ಕೊರತೆ ನೀಗಲಿದೆ ಎಂದು ತಿಳಿಸಿದರು.
ʼಭೂ ಆಧಾರ್ ಯೋಜನೆʼ ಜಾರಿಗೆ :
ರಾಜ್ಯದಲ್ಲಿ 4 ಕೋಟಿ ಆರ್‌ಟಿಸಿಯಲ್ಲಿ 2 ಕೋಟಿ ಆರ್‌ಟಿಸಿಗಳ ಪರಿಶೀಲನೆ ಆಗಿದೆ. ಆರ್‌ಟಿಸಿಗಳಿಗೆ ಆಧಾರ್ ಅಥೆಂಟಿಕೇಶನ್ ಆಗಬೇಕು. ಇದರಿಂದ ಡೂಪ್ಲಿಕೇಟ್ ಮಾರಾಟವನ್ನು ನಿಯಂತ್ರಣ ಮಾಡಲು ಅನುಕೂಲವಾಗುತ್ತದೆ. ಪತಿಯೊಬ್ಬರು ತಮ್ಮ ಜಮೀನಿಗೆ ಆಧಾರ್ ಸಿಡಿಂಗ್ ಮಾಡಲು ಭೂ ಆಧಾರ್ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರು ತಮ್ಮ ಆಸ್ತಿಗೆ ಆಧಾರ್ ಸೀಡಿಂಗ್ ಮಾಡಿಸಿದರೆ, ನಕಲಿ ದಾಖಲೆಗಳನ್ನು ಸೃಷ್ಠಿಸಿ ಮಾರಾಟ ಮಾಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ಸಭೆಯಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಸರ್ವೆ ಇಲಾಖೆಯ ಉಪ ನಿರ್ದೇಶಕರು ಹಾಗೂ ತಹಶೀಲ್ದಾರ್ ಗಳು ಉಪಸ್ಥಿತರಿದ್ದರು.