ಲೋಕಸಭಾ ಚುನಾವಣೆ | ಮುನಿಸು ಮರೆತು ಒಂದಾದ ಎಚ್.ವಿಶ್ವನಾಥ್ ಹಾಗೂ ಎಚ್.ಡಿ.ಕುಮಾರಸ್ವಾಮಿ
Photo: x/@hd_kumaraswamy
ಮೈಸೂರು : ಸಮ್ಮಿಶ್ರ ಸರಕಾರ ಪತನವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್.ವಿಶ್ವನಾಥ್ ಇದೀಗ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆವರ ಜೊತೆ ಒಂದಾಗಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿರುವ ಎಚ್.ವಿಶ್ವನಾಥ್ ಅವರ ಮನೆಗೆ ಶನಿವಾರ ಎಚ್.ಡಿ.ಕುಮಾರಸ್ವಾಮಿ ಆಗಮಿಸಿ ಮಾತುಕತೆ ನಡೆಸಿದರು.
ಕೆ.ಆರ್.ನಗರ ಮಂಡ್ಯ ಲೋಕಸಭಾ ವ್ಯಾಪ್ತಿಗೆ ಬರುವುದರಿಂದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಇಂದು ವಿಶ್ವನಾಥ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದರು.
ನಂತರ ಮಾತನಾಡಿದ ಎಚ್.ವಿಶ್ವನಾಥ್, ʼರಾಜಕಾರಣ ನಿಂತ ನೀರಲ್ಲ. ಹರಿಯುವ ಗಂಗೆ. ಮಾತು, ಸಂಘರ್ಷ ರಾಜಕಾರಣದಲ್ಲಿ ಸಹಜ. ಇದನ್ನೆಲ್ಲಾ ಒಂದೊಂದು ಬಾರಿ ಸರಿಪಡಿಸಿಕೊಳ್ಳಬೇಕು. ದೇವೇಗೌಡರು ನನಗೆ ಸದಾ ಸ್ಮರಣೀಯರು. ನನ್ನ ಸಾರಾ ಮಹೇಶ್ ಭಿನ್ನಾಭಿಪ್ರಾಯ ಚಾಮುಂಡಿ ಬೆಟ್ಟದ ತನಕ ಹೋಗಿತ್ತು. ಇದೆಲ್ಲಾ ಸಹಜ. ಈಗ ಅದನ್ನೆಲ್ಲಾ ಮರೆತು ಜೊತೆಯಾಗಿದ್ದೇವೆ. ಈಗ ಎಲ್ಲಾ ಮರೆತು ಕುಮಾರಸ್ವಾಮಿ ನಮ್ಮ ಮನೆಗೆ ಬಂದಿದ್ದಾರೆʼ ಎಂದರು.
ದೇವೇಗೌಡರ ಕುಟುಂಬವನ್ನು ಸೋಲಿಸುತ್ತೇನೆ ಎಂಬ ಮಾತನ್ನು ಸಿದ್ದರಾಮಯ್ಯ ಬಿಡಬೇಕು. ಸಿದ್ದರಾಮಯ್ಯ ದುರಹಂಕಾರದ ಮಾತು ಮೊದಲು ಬಿಡಬೇಕು. ಸಿದ್ದರಾಮಯ್ಯ ಅವರೇ, ಮೈಸೂರಲ್ಲಿ ನಿಮ್ಮ ಮಗನನ್ನು ನಿಲ್ಲಿಸಬೇಕು ಅಂದುಕೊಂಡಿದ್ದಿರಿ. ನನ್ನ ಹೆಸರೂ ಇತ್ತು. ಸರ್ವೇ ವರದಿ ಬಂದ ಮೇಲೆ ಪಾಪ ಲಕ್ಷ್ಮಣ್ ಅವರನ್ನು ನಿಲ್ಲಿಸಿದ್ದೀರಿ. ಮೈಸೂರಲ್ಲಿ ಯದುವೀರ್, ಮಂಡ್ಯದಿಂದ ಕುಮಾರಸ್ವಾಮಿ ಗೆಲ್ಲಬೇಕು ಎಂದು ವಿಶ್ವನಾಥ್ ಹೇಳಿದರು.
ಇದೇ ವೇಳೆ ಜೆಡಿಎಸ್ ನಾಯಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಪುಟ್ಟರಾಜು ಜೊತೆಯಲ್ಲಿದ್ದರು.