ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಒಬ್ಬ ರೌಡಿ ಶೀಟರ್ : ಎಂ.ಲಕ್ಷ್ಮಣ್
ಮೈಸೂರು : ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನನ್ನ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿರುವ ಆರ್.ಟಿ.ಐ. ಕಾರ್ಯಕರ್ತ ಎಂದು ಹೇಳಿಕೊಳ್ಳುವ ಸ್ನೇಹಮಯಿ ಕೃಷ್ಣ ಒಬ್ಬ ರೌಡಿ ಶೀಟರ್. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ 100 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ಎಂಬ ರೌಡಿ ಶೀಟರ್, ಈತನ ವಿರುದ್ಧ ಮೈಸೂರು ನಗರದ ಕೆ.ಆರ್.ಪೊಲೀಸ್ ಠಾಣೆಯಲ್ಲಿ 01-04-2019ರಲ್ಲಿ ರೌಡಿ ಶೀಟ್ ಓಪನ್ ಮಾಡಲಾಗಿದೆ. ಈತನ ವಿರುದ್ಧ ರಾಜ್ಯಾದ್ಯಂತ 54 ಪ್ರಕರಣಗಳು ದಾಖಲಾಗಿವೆ. ಮೈಸೂರು ನಗರ ಒಂದರಲ್ಲೇ 17 ಪ್ರಕರಣಗಳು, ಗ್ರಾಮಾಂತರದಲ್ಲಿ 12, ರಾಜ್ಯದ ಇತರೆಡೆಗಳಲ್ಲಿ 15 ಪ್ರಕರಣಗಳು ದಾಖಲಾಗಿವೆ. ಈತ ಭೂ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಕೆಲವು ಸಹಚರರೊಂದಿಗೆ ಜನರನ್ನು ಹೆದರಿಸುವುದು, ಬ್ಲಾಕ್ ಮೇಲ್ ಮಾಡುವುದು ಮತ್ತು ಬೆದರಿಕೆ ಹಾಕುವ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾನೆ. ಸಿಎಂ ಪತ್ನಿ ಪಡೆದ 14 ನಿವೇಶನದ ವಿಚಾರವಾಗಿಯೂ ಮಧ್ಯವರ್ತಿ ಒಬ್ಬರಿಂದ 100 ಕೋಟಿ ರೂ. ಬೇಡಿಕೆ ಇಟ್ಟಿದ್ದ. ನಾನು ಕಾನೂನು ಪ್ರಕಾರ ನಿವೇಶನ ಪಡೆದ ಮೇಲೆ ಯಾಕೆ ಕೊಡಬೇಕು, ಕೊಡುವುದಿಲ್ಲ ಎಂದು ಹೇಳಿ ಕಳುಹಿಸಿದ್ದೆ. ಸಮಯ ಬಂದಾಗ ಮಧ್ಯವರ್ತಿಯಿಂದಲೇ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿಸುತ್ತೇನೆ ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ ಸಿಎಂ ಪತ್ನಿ ಪಾರ್ವತಿ ಮತ್ತು ನನ್ನ ವಿರುದ್ಧ ನಕಲಿ ಸಹಿ ಮಾಡಿ ದಾಖಲೆ ಸೃಷ್ಟಿಸಲಾಗಿದೆ ಎಂದು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಇಂದು ದೂರು ನೀಡಿದ್ದಾನೆ. ಈ ಎಲ್ಲಾ ದಾಖಲೆಗಳನ್ನು ಎಫ್.ಎಸ್.ಎಲ್ ಗೆ ಕಳುಹಿಸಿ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ಇದೇ ರೌಡಿ ಶೀಟರ್ ಸ್ನೇಹಮಯಿ ಕೃಷ್ಣ ಅವರ ಮನೆಯನ್ನು ಪೊಲೀಸರು ದಾಳಿ ಮಾಡಿದರೆ ಆತನ ಮನೆಯಲ್ಲಿ ಮುಡಾ ಸೀಲ್ ಗಳು, ಛಾಪಾ ಕಾಗದ ಸೇರಿದಂತೆ ಹಲವು ದಾಖಲೆಗಳು ಸಿಗುತ್ತವೆ. ಈತ ಇವೆಲ್ಲವನ್ನು ಇಟ್ಟುಕೊಂಡು ನಕಲಿ ದಾಖಲೆ ಸೃಷ್ಟಿಸಿ ಜನರಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಬಿ.ಎಂ.ರಾಮು, ಕೆಪಿಸಿಸಿ ಸಂಯೋಜಕ ಎನ್.ಭಾಸ್ಕರ್, ಕಾಂಗ್ರೆಸ್ ಮುಖಂಡರುಗಳಾದ ವಾಸು, ಈಶ್ವರ್ ಚಕ್ಕಡಿ, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.