ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ 80 ಸಾವಿರ ಬಿಪಿಎಲ್ ಕಾರ್ಡ್‌ಗಳ ಬದಲಾವಣೆ : ಎಂ.ಲಕ್ಷ್ಮಣ್
"ಬಿಜೆಪಿಯವರು ಸುಳ್ಳು ಹೇಳಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ"
ಮೈಸೂರು : "ಕೇಂದ್ರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನಿರ್ದೇಶನದ ಮೇರೆಗೆ 80 ಸಾವಿರ ಬಿಪಿಎಲ್ ಕಾರ್ಡ್‌ದಾರರನ್ನು ಎಪಿಎಲ್‌ಗೆ ಬದಲಾವಣೆ ಮಾಡಲಾಗಿದೆಯೇ ಹೊರತು, ಬಿಪಿಎಲ್ ಕಾರ್ಡ್ ರದ್ದುಮಾಡಿಲ್ಲ. ಬಿಜೆಪಿಯವರು ಸುಳ್ಳು ಹೇಳಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ" ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʼಬಡವರು, ಸಾಮಾಜಿಕ ನ್ಯಾಯದ ಪರ ಕಾಂಗ್ರೆಸ್ ಪಕ್ಷ ಇದೆಯೇ ಹೊರತು ಬಿಜೆಪಿ ಪಕ್ಷ ಅಲ್ಲ, ಬಡವರಿಗಾಗಿ ಯುಪಿಎ ಸರಕಾರದ ಅಂದಿನ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು 2013 ರಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದರು. ಇದರ ಮಾನದಂಡದಂತೆ ಗ್ರಾಮೀಣ ಪ್ರದೇಶದಲ್ಲಿ ಶೇ.76 , ನಗರ ಪ್ರದೇಶದಲ್ಲಿ ಶೇ.49ಗಿಂತ ಹೆಚ್ಚು ಬಿಪಿಎಲ್ ಕಾರ್ಡ್‌ದಾರರು ಇರಬಾರದು ಎಂಬ ನಿಯಮ ಇದೆ. ಅದರಂತೆ ಕೇಂದ್ರ ಸರಕಾರ 12 ಲಕ್ಷ ಅಡಿಷನಲ್ ಬಿಪಿಎಲ್ ಕಾರ್ಡ್ ನೀಡಲಾಗಿದೆ ಅದನ್ನು ರದ್ದುಗೊಳಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ನಮ್ಮಕಾಂಗ್ರೆಸ್ ಸರಕಾರ ಅವರ ಆದೇಶವನ್ನು ಧಿಕ್ಕರಿಸಿ ಕೇವಲ 80 ಸಾವಿರ ಬಿಪಿಎಲ್ ಕಾರ್ಡ್‌ದಾರರನ್ನು ರದ್ದು ಮಾಡದೆ ಎಪಿಎಲ್‌ಗೆ ಬದಲಾವಣೆ ಮಾಡಲಾಗಿದೆʼ ಎಂದು ಸ್ಪಷ್ಟಪಡಿಸಿದರು.
ದೇಶಾದ್ಯಂತ 5.8 ಕೋಟಿ ಬಿಪಿಎಲ್ ಕಾರ್ಡ್ ರದ್ದು :
ಬಿಪಿಎಲ್ ಕಾರ್ಡ್ ಪರಿಷ್ಕರಣೆ ನಮ್ಮ ರಾಜ್ಯ ಒಂದರಲ್ಲೇ ನಡೆದಿಲ್ಲ, ದೇಶದ ಎಲ್ಲಾ ರಾಜ್ಯಗಳಲ್ಲೂ ನಡೆದಿದೆ. ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ದೇಶಾದ್ಯಂತ 5.8 ಕೋಟಿ ಬಿಪಿಎಲ್ ಕಾರ್ಡ್‌ದಾರರನ್ನು ಕೈಬಿಡಲಾಗಿದೆ. ಅದನ್ನ ಏಕೆ ಬಿಜೆಪಿಯವರು ಮಾತನಾಡುತ್ತಿಲ್ಲ? ರಾಜಕೀಯ ಕಾರಣಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರದ ಮೇಲೆ ಗೂಬೆ ಕೂರಿಸಲು ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯಲ್ಲಿ 9 ತಾಲ್ಲೂಕುಗಳಿದ್ದು, 1.20 ಲಕ್ಷ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಇದರಲ್ಲಿ 4221 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಕಟ್ಟುವವರು, ಬಿಲ್ಡಿಂಗ್ ಇಟ್ಟುಕೊಂಡಿರುವವರನ್ನು ಗುರುತಿಸಿ ಕೈಬಿಡಲಾಗಿದೆ. ಇದರಲ್ಲಿ ಅರ್ಹರನ್ನು ಕೈಬಿಟ್ಟಿದ್ದರೆ ಅವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಶಿವಣ್ಣ, ಬಿ.ಎಂ.ರಾಮು, ಗಿರೀಶ್ ಉಪಸ್ಥಿತರಿದ್ದರು.