ಈ.ಡಿಯ ದುರುದ್ದೇಶದ ನಡೆಯ ವಿರುದ್ಧ ರಾಷ್ಟ್ರಪತಿಗೆ ದೂರು ಸಲ್ಲಿಸುತ್ತೇವೆ : ಎಂ.ಲಕ್ಷ್ಮಣ್

ಮೈಸೂರು : ಜಾರಿ ನಿರ್ದೇಶನಾಲಯದ (ಈಡಿ) ಪತ್ರಿಕಾ ಪ್ರಕಟಣೆಯು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ನಾಶ ಮಾಡುವ, ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರವಾಗಿದೆ. ಈ.ಡಿ.ಯ ಈ ದುರುದ್ದೇಶದ ನಡೆಯ ವಿರುದ್ಧ ರಾಷ್ಟ್ರಪತಿಗೆ ದೂರು ದೂರು ಸಲ್ಲಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ನಗರ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖೆ ಪೂರ್ಣಗೊಳ್ಳುವ ಮುನ್ನ ಎಪಿಸೋಡ್ ರೀತಿ ಮಾಹಿತಿ ಹಂಚಿಕೊಳ್ಳಬಹುದೇ? ತನಿಖಾ ಮಾಹಿತಿ ಬಹಿರಂಗಪಡಿಸಲು ನ್ಯಾಯಾಲಯದ ನಿರ್ದೇಶನ ಇತ್ತೇ? ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಉತ್ತರಿಸಬೇಕು ಎಂದು ಒತ್ತಾಯಿಸಿದರು.
ತನ್ನ ಪಾವಿತ್ರ‍್ಯತೆಯನ್ನು ಕಳೆದುಕೊಂಡಿರುವ ಈಡಿ ಬಿಜೆಪಿ, ಆರೆಸ್ಸೆಸ್‌ನ ಬಾಲಂಗೋಚಿಯಾಗಿ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಹೆಸರಲ್ಲಿ ನಿವೇಶನ ಇತ್ತೇ? ಪ್ರಕಟಣೆಯಲ್ಲಿ ಉದ್ದೆಶಪೂರ್ವಕವಾಗಿ ಸಿದ್ದರಾಮಯ್ಯ ಹೆಸರು ಸೇರಿಸುವುದು ನಿಮ್ಮ ಉದ್ದೇಶ ಏನು? ಎಂದು ಪ್ರಶ್ನಿಸಿದರು.
142 ನಿವೇಶನಗಳ ಸಂಖ್ಯೆ ಬಿಡುಗಡೆ ಮಾಡಿರುವ ಈಡಿ ಅಧಿಕಾರಿಗಳು ಯಾರ ಹೆಸರಲ್ಲಿದೆ ಎಂಬ ಮಾಹಿತಿ ನೀಡಬೇಕು. ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದ್ದ ನಿವೇಶನದ ಉಲ್ಲೇಖವಿಲ್ಲ. ಬೆಂಗಳೂರಿನ ಮಂಜುನಾಥ್, ಮೈಸೂರಿನ ಜಯರಾಮ್, ಕ್ಯಾಥಡ್ರೆಲ್ ಪ್ಯಾರಲ್ ಸೊಸೈಟಿ 63, ಬಿಜೆಪಿ, ಜೆಡಿಎಸ್ ಮುಖಂಡರು 97 ನಿವೇಶನಗಳನ್ನು ಬೇನಾಮಿ ಹೆಸರಲ್ಲಿ ಪಡೆದುಕೊಂಡಿರುವ ಮಾಹಿತಿ ನಮ್ಮ ಬಳಿ ಇದೆ ಎಂದರು.
ಸಿದ್ದರಾಮಯ್ಯ ಅವರ 14 ನಿವೇಶನ ಒಟ್ಟು 56 ಕೋಟಿ ರೂ. ಎಂದು ಈಡಿ ಅಂದಾಜು ಮಾಡಿದೆ. ಈಡಿ ಲೆಕ್ಕಚಾರದ ಪ್ರಕಾರ ಚದರಡಿ 17 ಸಾವಿರ ರೂ.ಗಳಾಯಿತು. ವಿಜಯನಗರದಲ್ಲಿ ಚದರಡಿಗೆ 17 ಸಾವಿರ ರೂ. ದರ ಇದೆಯೇ? ಇದ್ದರೆ ನನ್ನ ಸಂಬಂಧಿಕರದ್ದೊಂದು ನಿವೇಶನವನ್ನು ಈಡಿ ಅಧಿಕಾರಿಗಳು ಮಾರಿಸಿ ಕೊಡುತ್ತಾರೆಯೇ? ಎಂದು ಕೇಳಿದರು.
ಮುಡಾದಿಂದ ಪಡೆದಿದ್ದ ನಿವೇಶನವನ್ನು ವಾಪಸ್ ನೀಡಿದ್ದರೂ ಪ್ರಕರಣವನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟಲಾಗುತ್ತಿದೆ. ರಾಷ್ಟ್ರೀಯ ವಾಹಿನಿಗಳಲ್ಲಿ ದಿನಪೂರ್ತಿ ತಪ್ಪು ಮಾಹಿತಿ ಪ್ರಕಟಿಸಿ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಾಧ್ಯಮ ವಕ್ತಾರ ಕೆ. ಮಹೇಶ್ ಇದ್ದರು.