ಮೈಸೂರನ್ನು ಮಣಿಪುರವನ್ನಾಗಿಸುವ ಸಂಚನ್ನು ಬಿಜೆಪಿ-ಆರೆಸ್ಸೆಸ್ ಮಾಡುತ್ತಿದೆ : ಎಂ.ಲಕ್ಷ್ಮಣ್
"ಆರೆಸ್ಸೆಸ್ ಕಾರ್ಯಕರ್ತರು ಟೋಪಿ ಹಾಕಿಕೊಂಡು ಬಂದು ಗಲಾಟೆ ಮಾಡಿದ್ದಾರೆ"

ಮೈಸೂರು : ಶಾಂತವಾಗಿರುವ ಮೈಸೂರನ್ನು ಮಣಿಪುರ ರಾಜ್ಯದಂತೆ ಪ್ರಕ್ಷುಬ್ಧಗೊಳಿಸುವ ಸಂಚನ್ನು ಬಿಜೆಪಿ ಮತ್ತು ಆರೆಸ್ಸೆಸ್ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಮುಸ್ಲಿಂ ಧರ್ಮ ಗುರುಗಳ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಬಂಧಿಸುವಂತೆ ಉದಯಗಿರಿ ಠಾಣೆಯಲ್ಲಿ ಮಂಗಳವಾರ ದೂರು ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಕದಡುವ ಮತ್ತು ಪ್ರಚೋದನಕಾರಿ ಭಾಷಣ ಮಾಡುವವರನ್ನು ಶೂಟ್ ಮಾಡುವಂತೆ ಒತ್ತಾಯಿಸಿದರು.
ಮುಡಾ ಪ್ರಕರಣವನ್ನು ದೇಶದಾದ್ಯಂತ ಪ್ರಚಾರ ಮಾಡಿದಂತೆಯೇ ಉದಯಗಿರಿಯ ಘಟನೆಯನ್ನು ರಾಜ್ಯಾದ್ಯಂತ ಪ್ರಸಾರ ಮಾಡಿ ಹಿಂದೂ-ಮುಸ್ಲಿಂ ಗಲಾಟೆ ಎಬ್ಬಿಸುವ ಸಂಚು ಮಾಡಲಾಗುತ್ತಿದೆ. ಪೊಲೀಸರು ಯಾರನ್ನೂ ಬಿಡದಂತೆ ಎಲ್ಲರನ್ನೂ ಬಂಧಿಸುಬೇಕು ಎಂದು ಹೇಳಿದರು.
ಪ್ರತಾಪ್ ಸಿಂಹ ಬಂಧಿಸಿ: ಮಾಜಿ ಸಂಸದ ಪ್ರತಾಪಸಿಂಹ ಯಾರಿಗೆ ತೊಂದರೆ ಆಗಿರುವುದಕ್ಕೆ ಉದಯಗಿರಿಗೆ ಭೇಟಿ ನೀಡಿದರು. ಸತೀಶ್ ಯಾರು? ಆತನ ಹಿಂದಿರುವವರು ಯಾರು? ನಮಗಿರುವ ಮಾಹಿತಿಯ ಪ್ರಕಾರ ಸತೀಶ್ ಎಂಬ ವ್ಯಕ್ತಿ ಪ್ರತಾಪ್ ಸಿಂಹ ಅವರ ಬಲಗೈ ಬಂಟ ಎಂದು ತಿಳಿದು ಬಂದಿದೆ. ಇವೆಲ್ಲ ವಿಚಾರವನ್ನು ಪತ್ತೆ ಮಾಡಲು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಕ್ಯಾತಮಾರನಹಳ್ಳಿಗೆ ಬಂದು ಪ್ರಚೋದನಕಾರಿಯಾಗಿ ಮಾತಾಡಿರುವ ಪ್ರತಾಪ ಸಿಂಹ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.
300 ಆರೆಸ್ಸೆಸ್ ಕಾರ್ಯಕರ್ತರು ಭಾಗಿ: 300ಕ್ಕೂ ಹೆಚ್ಚು ಆರೆಸ್ಸೆಸ್ ಕಾರ್ಯಕರ್ತರು ಮೈಸೂರಿಗೆ ಬಂದಿದ್ದಾರೆ. ಅವರಲ್ಲಿ 50 ಕಾರ್ಯಕರ್ತರು ಉದಯಗಿರಿಗೆ ಬಂದಿದ್ದಾರೆ. ವೇಷ ಮರೆಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತರು ಟೋಪಿ ಹಾಕಿಕೊಂಡು ಬಂದು ಗಲಾಟೆ ಮಾಡಿದ್ದಾರೆ. ಇವರ ವಿರುದ್ಧ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ವಿರುದ್ಧ ಪೋಸ್ಟ್ ಮಾಡಿದ್ದರೆ ಬಿಜೆಪಿಯವರು ಸುಮ್ಮನಿರುತ್ತಿದ್ದರೆ? ಮುಸ್ಲಿಂ ಧರ್ಮ ಗುರುಗಳ ಅವಹೇಳನಾಕಾರಿ ಪೊಸ್ಟರ್ ಹಾಕಿರುವುದು ತಪ್ಪಲ್ಲವೇ? ಮುಸ್ಲಿಮರು ಈ ದೇಶದ ಮಕ್ಕಳು ಅಲ್ಲವೇ? ಅವರೇನು ಹೊರದೇಶದಿಂದ ಬಂದವರೇ? ಎಂದು ಪ್ರಶ್ನಿಸಿದರು.
ಉದಯಗಿರಿ ಠಾಣೆಗೆ ತೆರಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ ಪೊಲೀಸರು :
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿರುವುದನ್ನು ಖಂಡಿಸಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ನಮಗೂ ಠಾಣೆಗೆ ಹೋಗಲು ಅವಕಾಶ ನೀಡುವಂತೆ ಒತ್ತಾಯಿಸಿ ಠಾಣೆ ಕಡೆಗೆ ತೆರಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಉದಯಗಿರಿ ಮುಖ್ಯ ರಸ್ತೆಯ ಜೆಎಸ್‌ಎಸ್ ಕಾಲೇಜು ಬಳಿ ಪೊಲೀಸರು ತಡೆದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ರಸ್ತೆಯಲ್ಲೇ ಪ್ರತಿಭಟನೆ ಕುಳಿತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸುವಂತೆ ಧಿಕ್ಕಾರ ಕೂಗಿದರು.