ಮಂಡ್ಯವನ್ನು ಮಂಗಳೂರು ಮಾಡಲು ಬಿಡಲ್ಲ: ಸಚಿವ ಚಲುವರಾಯಸ್ವಾಮಿ
ಮೈಸೂರು: ಮಂಡ್ಯದ ಕೆರಗೋಡಿನಲ್ಲಿ ಹಾರಿಸಲಾಗಿರುವ ರಾಷ್ಟ್ರಧ್ವಜ ತೆಗೆಯುವಂತೆ ಒತ್ತಾಯಿಸಿ ಮಂಡ್ಯ ಬಂದ್, ಹೋರಾಟ ಮಾಡುತ್ತಾರೆಯೇ? ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಪ್ರಶ್ನಿಸಿದರು.
ಮಂಡ್ಯ ಬಂದ್ ವಿಚಾರವಾಗಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರೈತರಿಗಾಗಿ, ಕಾವೇರಿ ನೀರಿಗಾಗಿ ಹೋರಾಟ ಮಾಡಿದರೆ ಜೊತೆ ನಿಲ್ಲುತ್ತೇವೆ. ಬಂದ್‌ಗೆ ಕರೆ ಕೊಟ್ಟಿರುವುದು ಯಾವ ಪುರುಷಾರ್ಥಕ್ಕೆ? ಬಿಜೆಪಿ-ಜೆಡಿಎಸ್‌ನವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುತ್ವ ಅವರಿಗಿಂತ ನಮಗೆ ಜಾಸ್ತಿ ಇದೆ. ಭಕ್ತಿಯೂ ಹೆಚ್ಚಿದೆ. ಮಂಡ್ಯವನ್ನು ಮಂಗಳೂರು ಮಾಡುವುದಕ್ಕೆ ಬಿಡಲ್ಲ. ಜನರೇ ಮಂಡ್ಯ ಬಂದ್ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರಿಂದ ನಾನು ಲೀಡರ್ ಆಗಿಲ್ಲ. ದೇವೇಗೌಡರ ಮೇಲಿನ ಗೌರವಕ್ಕಾಗಿ ಮಾತ್ರ ಸುಮ್ಮನಿದ್ದೇನೆ. ನಾನು ಕುಮಾರಸ್ವಾಮಿ ಋಣದಲ್ಲಿ ಇಲ್ಲ. ನಾನೇನೂ ಅವರ ಆಸ್ತಿ ತಿಂದಿಲ್ಲ. ಕುಮಾರಸ್ವಾಮಿ ಅವರಿಗೆ ಗೌರವ ಬೇಡ ಎನ್ನುವುದಾದರೆ ಬೇರೆಯ ರೀತಿ ಉತ್ತರ ಕೊಡಲು ನನಗೆ ಬರುತ್ತದೆ. ಅವರಿಂದ ನನ್ನ ಹಣೆಬರಹ ಬರೆಯಲಾಗುವುದಿಲ್ಲ ಎಂದು ತಿಳಿಸಿದರು.