ಪ್ರಧಾನಿ ಮೋದಿ ಸಮಾವೇಶ | ಬಿ.ಎಸ್.ಯಡಿಯೂರಪ್ಪ ಆಹ್ವಾನ ತಿರಸ್ಕರಿಸಿದ ಸಂಸದ ಶ್ರೀನಿವಾಸ್ ಪ್ರಸಾದ್
ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವಿವಾರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದರಾದರೂ, ಇದನ್ನು ಸಂಸದ ಶ್ರೀನಿವಾಸ್ ಪ್ರಸಾದ್ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಜಯಲಕ್ಷ್ಮಿಪುರಂ ನಲ್ಲಿರುವ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮನೆ ಭೇಟಿ ನೀಡಿದ ಯಡಿಯೂರಪ್ಪ ಆರೋಗ್ಯ ವಿಚಾರಿಸಿದರು.ಯಡಿಯೂರಪ್ಪ ಆಗಮನದಿಂದ ಸಂತೋಷಗೊಂಡ ಶ್ರೀನಿವಾಸ್ ಪ್ರಸಾದ್ ಕೆಲ ಕಾಲ ಮಾತುಕತೆ ನಡೆಸಿದರು.
ಬಳಿಕೆ ಮೋದಿ ಕಾರ್ಯಕ್ರಮಕ್ಕೆ ಬರುವಂತೆ ಯಡಿಯೂರಪ್ಪ ಆಹ್ವಾನಿಸಿದರು. ನನಗೆ ಆರೋಗ್ಯ ಸರಿ ಇಲ್ಲ, ನಡೆಯಲು ಆಗಲ್ಲ. ನಿಮ್ಮ ಆಹ್ವಾನಕ್ಕೆ ನಾನು ಗೌರವಿಸುತ್ತೇನೆ. ಆದರೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ನನಗೆ ಬರಲು ಸಾಧ್ಯವಿಲ್ಲ, ಒಂದು ವೇಳೆ ಆರೋಗ್ಯ ಸರಿಯಾದರೆ ಬರುತ್ತೇನೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಹಳೇ ಮೈಸೂರು ಭಾಗದ ಪ್ರಭಾವಿ ದಲಿತ ನಾಯಕ ವಿ.ಶ್ರೀನಿವಾಸ್ ಪ್ರಸಾದ್, ಇತ್ತೀಚೆಗಷ್ಟೆ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಇದಾದ ಬಳಿಕ ಅವರ ಸಹೋದರ ಸೇರಿದಂತೆ ಅನೇಕ ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರಿದ್ದರು.
ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ್ದು, ಬಿಜೆಪಿ ಪಕ್ಷದಲ್ಲಿ ತಳಮಳ ಉಂಟು ಮಾಡಿತ್ತು.ಇದರ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿ ಹೇಗಾದರೂ ಮಾಡಿ ಬಿಜೆಪಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಬೇಕು ಎಂಬ ಸಾಹಸಕ್ಕೆ ಮುಂದಾಗಿದ್ದಾರೆ.