ಮೈಸೂರು | ರಾಜ್ಯಪಾಲರ ರಾಜೀನಾಮೆಗೆ ಒತ್ತಾಯಿಸಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಪ್ರತಿಭಟನೆ
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪಂಚ ಗ್ಯಾರಂಟಿ ಯೋಜನೆಗಳ ಮಹಿಳಾ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಭವನದ ಆವರಣದಲ್ಲಿ ರವಿವಾರ ಸಮಾವೇಶಗೊಂಡ ಮಹಿಳಾ ಕಾರ್ಯಕರ್ತೆಯರು ಬಿಜೆಪಿ-ಜೆಡಿಎಸ್ ವಿರುದ್ಧ ಘೋಷಣೆ ಕೂಗಿದರು. ನಾನು ಸಿದ್ದರಾಮಯ್ಯ ಪರ, ನಾನು ಶಕ್ತಿ ಯೋಜನೆಯ ಫಲಾನುಭವಿ, ರಾಜ್ಯಪಾಲರು ಗೋ ಬ್ಯಾಕ್ ಪ್ಲೇಕಾರ್ಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ರಾಜ್ಯಪಾಲರು ರಾಜ್ಯಪಾಲನೆ ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್-ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಷಡ್ಯಂತ್ರ ಮಾಡಿದ್ದಾರೆ. ಅದು ಫಲಿಸುವುದಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳು ಮತ್ತು ಭಾಗ್ಯಗಳ ಮುಖ್ಯಮಂತ್ರಿಗಳು ಬಡವರ ಪರವಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಸಹಿಸಲಾಗದೇ ಹುನ್ನಾರ ನಡೆಸಿದ್ದಾರೆ. ಇಡೀ ರಾಜ್ಯದ ಎಲ್ಲ ಮಹಿಳೆಯರು ಸಿದ್ದರಾಮಯ್ಯ ಪರವಾಗಿದ್ದೇವೆ. ರಕ್ತ ಕೊಟ್ಟೆವು, ಪ್ರಾಣ ಬಿಟ್ಟರೂ ಅವರು ಸೋಲಲು ಬಿಡುವುದಿಲ್ಲ ಎಂದು ನುಡಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ-ಜೆಡಿಎಸ್ ವಿರುದ್ಧದ ಈ ಹೋರಾಟದಲ್ಲಿ ಗೆಲ್ಲುವುದು ನೂರಕ್ಕೆ ನೂರು ಗ್ಯಾರಂಟಿಯಾಗಿದೆ. ಯಾವತ್ತೂ ಸತ್ಯವೇ ಗೆಲ್ಲಲಿದೆ ಎಂದು ಹೇಳಿದರು.
ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಎಚ್.ಡಿ. ಕುಮಾರಸ್ವಾಮಿ ಅವರು ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರಿಗೆ ದೂರು ಕೊಡಲಾಗಿದೆ. ಯಾವಾಗ ಅನುಮತಿ ಕೊಡುತ್ತಾರೆ? ಸಿದ್ದರಾಮಯ್ಯ ಪ್ರಕರಣದಲ್ಲಿ ಆತುರವಾಗಿ ನಿರ್ಧಾರ ಕೈಗೊಂಡಂತೆ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಇನ್ನೆಷ್ಟು ದಿನಗಳು ಬೇಕು? ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಮುಖಂಡರಾದ ಪುಷ್ಪಾವಲ್ಲಿ, ಲತಾಸಿದ್ದಶೆಟ್ಟಿ, ಲತಾ ಮೋಹನ್, ಮಂಜುಳಾ, ರಾಜೇಶ್ವರಿ, ಭವ್ಯ, ನಾಗರತ್ನ, ರಾಣಿ ಸೇರಿ ನೂರಾರು ಮಂದಿ ಭಾಗವಹಿಸಿದ್ದರು.