ಮೈಸೂರು | ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನಿರಾಕರಣೆ : ಆರೋಪ
ಮೃತದೇಹವನ್ನು ದಾವಣಗೆರೆಗೆ ಕೊಂಡೊಯ್ದ ಕೊರಚ ಸಮುದಾಯ
ಸಾಂದರ್ಭಿಕ ಚಿತ್ರ
ಮೈಸೂರು: ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬವೊಂದು ಪರದಾಡಿದ ಅಮಾನವೀಯ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ನಡೆದಿರುವುದು ವರದಿಯಾಗಿದೆ.
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಕ್ಷೇತ್ರ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಈ ಘಟನೆ ನಡೆದಿದ್ದು, ಭೈರಾಪುರ ಪಟ್ಟಣದಲ್ಲಿ ವಾಸವಾಗಿರುವ ಕೊರಚ ಕುಟುಂಬದ ರತ್ನಮ್ಮ ಎಂಬವರು ಮೃತಪಟ್ಟಿದ್ದರು. ಆದರೆ ಇವರ ಮೂಲ ದಾವಣಗೆರೆ ಎಂದು ಸ್ಥಳೀಯರು ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎನ್ನಲಾಗಿದೆ. ಮೃತದೇಹವನ್ನು ಹೂಳಲು ಅವಕಾಶ ಕಲ್ಪಿಸಿಕೊಡದ್ದಕ್ಕೆ ಬೇಸರಗೊಂಡ ಕುಟುಂಬಸ್ಥರು ಮೃತದೇಹವನ್ನು ದಾವಣಗೆರೆಗೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
ಭೈರಾಪುರ ಪಟ್ಟಣದಲ್ಲಿ ವಾಸವಾಗಿರುವ ಕೊರಚ ಕುಟುಂಬದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ವಾಸಸ್ಥಳ ದೃಢೀಕರಣವಿದೆ. ಆದರೆ ಇಲ್ಲಿನ ಸ್ಮಶಾನದಲ್ಲಿ ಮೃತದೇಹ ಅಂತ್ಯಸಂಸ್ಕಾರ ನಡೆಸುವ ವೇಳೆ ಸ್ಥಳೀಯರು ನಿರಾಕರಣೆ ಮಾಡಿದ್ದಾರೆ. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಪ್ರತ್ಯೇಕ ಸ್ಮಶಾನವಿದ್ದು, ಯಾವ ಸ್ಮಶಾನದಲ್ಲೂ ಅಂತ್ಯಸಂಸ್ಕಾರಕ್ಕೆ ಸ್ಥಳೀಯ ಮುಖಂಡರು ಅವಕಾಶ ಮಾಡಿಕೊಟ್ಟಿಲ್ಲ ಎನ್ನಲಾಗಿದೆ.
ಈ ಬಗ್ಗೆ ಜಿಲ್ಲಾಡಳಿತ, ಅಧಿಕಾರಿಗಳು, ರಾಜಕಾರಣಿಗಳು ಮೌನವಾಗಿದ್ದು, ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳ ನಡೆಗೆ ಕುಟುಂಬಸ್ಥರು ಆಕ್ರೋಶಗೊಂಡು ಮೃತದೇಹವನ್ನು ದಾವಣಗೆರೆಗೆ ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂಡು ಹೋಗಿದ್ದಾರೆ.