ಮೈಸೂರು| ಎಲೆಕ್ಟ್ರಿಕ್ ಬಸ್, ಜೀಪ್ ನಡುವೆ ಢಿಕ್ಕಿ: ನಾಲ್ವರು ಕೂಲಿ ಕಾರ್ಮಿಕರು ಸಾವು
ಮೈಸೂರು: ಎಲೆಕ್ಟ್ರಿಕ್ ಬಸ್ ಹಾಗೂ ಜೀಪ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿವ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಹುಣಸೂರು ನಗರದ ಆರ್.ಟಿ.ಓ. ಕಚೇರಿ ಬಳಿ ಮಂಗಳವಾರ ಬೆಳಿಗ್ಗೆ ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಎಲೆಕ್ಟ್ರಿಕ್ ಬಸ್ ಮತ್ತು ಹುಣಸೂರಿನಿಂದ ಪಿರಿಯಾಪಟ್ಟಣಕ್ಕೆ ಶುಂಠಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೋರ್ವನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟವರನ್ನು ರಾಜೇಶ್, ಲೋಕೇಶ್, ಸೋಮೇಶ್ ಸೇರಿ ಜೀಪ್ ಚಾಲಕ ಎಂದು ಗುರುತಿಸಲಾಗಿದೆ. ಮೃತಪಟ್ಟ ನಾಲ್ವರು ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಹೋಬಳಿ ಜಿ.ಆರ್.ಕಾಲೋನಿ ನಿವಾಸಿಗಳು ಎಂದು ಹೇಳಲಾಗುತ್ತಿದೆ.
ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರನ್ನು ಮರೋಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.