ಮೈಸೂರು | ನಮ್ಮ ಭಾಷೆಯನ್ಮು ನಾವು ಪ್ರೀತಿಸಿದಾಗ ಮಾತ್ರ ಅದರ ನೋವು ಗೊತ್ತಾಗುತ್ತದೆ : ಸಾಹಿತಿ ಲಕ್ಷ್ಮೀಶ ತೋಳ್ಪಾಡಿ
ಮೈಸೂರು : ನಮ್ಮ ಭಾಷೆಯನ್ನು ನಾವು ಪ್ರೀತಿಸಿದಾಗ ಮಾತ್ರ ಅದರ ನೋವು ಏನು ಎನ್ನುವುದು ಗೊತ್ತಾಗುತ್ತದೆ ಎಂದು ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಚಾಲನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೀತಿ ಎನ್ನುವುದು ಸಂಭ್ರಮವಲ್ಲ. ಬದಲಾಗಿ ಆ ಭಾಷೆಯೆ ಘನತೆ, ಒಳನೋವು ಅರ್ಥಮಾಡಿಕೊಳ್ಳವ ಸಂವಹನ ಮಾಧ್ಯಮ. ಒಂದು ಭಾಷೆಗೆ ತನ್ನನ್ನು ತಾನು ಪೂರ್ತಿ ಪ್ರಕಟ ಮಾಡುವುದಕ್ಕೆ ಭಾಷೆಯನ್ನು ಪ್ರಕಟ ಮಾಡುವವರಿಗೆ ಸ್ಥಿತ್ಯಂತರ ಒದಗಬೇಕು. ಇದು ಆಗದೆ ಭಾಷೆಯ ನೈಜ ಸ್ವರೂಪ ಪ್ರಕಟಿಸುವುದು ಕಷ್ಟ. ಅದಕ್ಕಾಗಿ ಭಾಷೆಯನ್ನು ಪ್ರೀತಿಸಬೇಕು. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕನ್ನಡ ಭಾಷೆಯು ಸುಸಂಸ್ಕೃತವನ್ನು ಪಡೆದ ಭಾಷೆಯಾಗಿದೆ. 12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮ್ಮ, ಅಕ್ಕಮಹಾದೇವಿ ಮುಂತಾದವರ ನೇತೃತ್ವದಲ್ಲಿ ನಡೆದ ವಚನ ಚಳವಳಿಯಲ್ಲಿ ಕನ್ನಡ ಭಾಷೆಯೂ ಹೊಸತನವನ್ನು ಪಡೆದುಕೊಂಡಿತು. ಮುಂದೆ ಪುರಂದರ ದಾಸ, ಕನಕದಾಸರು ರಚಿಸಿದ ಕೀರ್ತನೆಗಳಿಂದ ಭಾಷೆಯೂ ಹೊಸ ಹೊಳಪು, ಕಾಂತಿ ಪಡೆದುಕೊಂಡಿತು. ಆದ್ದರಿಂದ ಭಾಷೆಯೂ ಮನುಷ್ಯರ ಮೂಲಕವೇ ಪ್ರಕಟವಾಗಬೇಕು. ಈ ರೀತಿ ಪ್ರಕಟವಾಗಲು ಭಾಷೆಯೂ ಕಾದು ಕುಳಿತಿರುತ್ತದೆ ಎಂದರು.
ಬರಹಗಾರಗಾರರಿಗೆ, ಲೇಖಕರಿಗೆ ಅವರ ಪುಸ್ತಕಗಳನ್ನು ಜನರು ಓದುವುದಕ್ಕಿಂತ ಸನ್ಮಾನ ಬೇರೊಂದಿಲ್ಲ. ಅದು ನಿಜವಾದ ಸಂತೋಷ. ಪುಸ್ತಕಗಳನ್ನು ಓದಿ ಟೀಕಿಸಿದರೂ ಅಡ್ಡಿಯಿಲ್ಲ. ಏಕೆಂದರೆ ನಮ್ಮ ಆಲೋಚನೆಗಳು ಓದುಗರ ಆಲೋಚನೆಗಳು ಆಗಿರಬೇಕಾಗಿಲ್ಲ. ಸಮಾಜ ಕ್ರಿಯಶೀಲವಾಗಿರಬೇಕಾದರೆ ಸಹಮತ, ಭಿನ್ನಮತ ಇರಬೇಕು. ಯೋಚನೆಗಳು, ಚಿಂತನೆಗಳಿಂದ ಮಾತ್ರ ವಿಕಾಸ ಸಾಧ್ಯ. ಇಲ್ಲದಿದ್ದರೆ ನಮ್ಮ ಮೆದುಳು ಜಡವಾಗುತ್ತದೆ ಎಂದರು.
ಶರಣ ಸಂಸ್ಕೃತಿ ಚಿಂತಕ ಶಂಕರ ದೇವನೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಸಂಸ್ಥಾಪಕ ಶಿವಕುಮಾರ್, ಚುಟುಕು ಕವಿ ಡಾ.ಎಂ.ಜಿ.ಆರ್.ಅರಸ್, ಡಾ.ರತ್ನ ಹಾಲಪ್ಪಗೌಡ, ಡಾ.ಪಳನಿಸ್ವಾಮಿ ಮೂಡುಗೂರು ಮತ್ತಿತರರು ವೇದಿಕೆಯಲ್ಲಿ ಇದ್ದರು.