ಮೈಸೂರು | ʼದಿಲ್ಲಿ ಚಲೋʼ ಗೆ ತೆರಳುತ್ತಿದ್ದ ರೈತರ ಬಂಧನ ಖಂಡಿಸಿ ಹೆದ್ದಾರಿ ತಡೆದು ಪ್ರತಿಭಟನೆ
ಮೈಸೂರು: ದಿಲ್ಲಿಯಲ್ಲಿ ಫೆ.13 ರಂದು ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ನಡೆಯಲಿರುವ “ದಿಲ್ಲಿ ಚಲೋ” ಸಮಾವೇಶದಲ್ಲಿ ಭಾಗವಹಿಸಲು ರಾಜ್ಯದಿಂದ ತೆರಳುತ್ತಿದ್ದ ರೈತರನ್ನು ಮಧ್ಯ ಪ್ರದೇಶದ ಭೂಪಾಲ್ ನಲ್ಲಿ ಬಂಧಿಸಿರುವುದನ್ನು ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ ಮತ್ತು ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರು-ನಂಜನಗೂಡು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ನಗರದ ಗನ್ ಹೌಸ್ ವೃತ್ತದಲ್ಲಿ ಸೋಮವಾರ ಜಮಾಯಿಸಿದ ಪ್ರತಿಭಟನಾಕಾರರು, ರೈತರು ಸಾಲ ಮನ್ನಾ ಮಾಡುವಂತೆ ಆಗ್ರಹಿಸುವುದು ತಪ್ಪೇ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವಂತೆ ಕೇಳುವುದು ಅಪರಾಧವೇ? ಎಂದು ಆಕ್ರೋಶದಿಂದ ಪ್ರಶ್ನಿಸಿದರು.
ಕೇಂದ್ರ ¸ಸರಕಾರವು ರೈತರ ಹೋರಾಟ ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಮಧ್ಯಪ್ರದೇಶ ಪೊಲೀಸರು ನಮ್ಮ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ. ರೈತ ವಿರೋಧಿ ಕೇಂದ್ರ ಸರಕಾರಕ್ಕೆ ಬುದ್ಧಿ ಕಲಿಸಬೇಕಾಗುತ್ತದೆ ಎಂದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿಸಾನ್ ಮೋರ್ಚಾದಿಂದ ದೆಹಲಿಯಲ್ಲಿ ಮಂಗಳವಾರ (ಫೆ.13) ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ. ಮೈಸೂರು ಭಾಗದ 150 ಮಂದಿ ಸೇರಿ ರಾಜ್ಯದಿಂದ 500ಕ್ಕೂ ಹೆಚ್ಚು ಮಂದಿ ರೈತರು ತೆರಳಿದ್ದರು. ಅವರಲ್ಲಿ ಮಹಿಳೆಯರೂ ಇದ್ದಾರೆ. ರೈಲಿನಲ್ಲಿ ತೆರಳುತ್ತಿದ್ದವರನ್ನು ಮಧ್ಯಪ್ರದೇಶ ಪೊಲೀಸರ ಮೂಲಕ ಬಂಧಿಸಲಾಗಿದೆ. ಕೆಲವರ ಮೇಲೆ ಹಲ್ಲೆಯೂ ನಡೆದಿದೆ ಎಂದು ಆರೋಪಿಸಿದರು.
ಭೂಪಾಲ್ ರೈಲು ನಿಲ್ದಾಣದಲ್ಲಿ ರೈತರನ್ನು ತಡೆದು ಸಮುದಾಯ ಭವನಗಳಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಕೇವಲ ಭಾಷಣದಲ್ಲಿ ರೈತರ ಬಗ್ಗೆ ಕರುಣೆ ವ್ಯಕ್ತಪಡಿಸುವ ಅವರ ದ್ರೋಹದ ನಡೆಗೆ ಚುನಾವಣೆಯಲ್ಲಿ ಉತ್ತರ ನೀಡಬೇಕಾಗುತ್ತದೆ. ಅಕ್ರಮವಾಗಿ ಬಂಧಿಸಿರುವ ರೈತರನ್ನು ಕೂಡಲೇ ಬಿಡುಗಡೆ ಮಾಡಿ, ಹೋರಾಟದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಬೇಕು. ಇಲ್ಲದಿದ್ದರೆ ನಿತ್ಯವೂ ವಿಭಿನ್ನವಾಗಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಉಪಾಧ್ಯಕ್ಷ ನೀಲಕಂಠಪ್ಪ ಮಾರ್ಬಳ್ಳಿ, ತಾಲ್ಲೂಕು ಘಟಕದ ಉಪಾಧ್ಯಕ್ಷ ಸಾತಗಳ್ಳಿ ಬಸವರಾಜ್, ಪ್ರಧಾನ ಕಾರ್ಯದರ್ಶಿ ಕಾಟೂರು ಮಹದೇವಸ್ವಾಮಿ, ಸದಸ್ಯರಾದ ನಾಗೇಶ್ ವರಕೋಡು, ಮಹದೇವಪ್ಪ ಹೀರನಂದಿ, ಗಿರೀಶ್ ಚುಂಚೂರಾಯನಹುಂಡಿ, ಶ್ರೀಕಂಠ, ಮಹೇಶ್, ಅರವಿಂದ ಪಾಲ್ಗೊಂಡಿದ್ದರು.