ಮೈಸೂರು: ಮಹಿಷ ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ಕಲ್ಪಿಸಲು ದಲಿತರ ಆಗ್ರಹ
ಅವಕಾಶ ನೀಡದಿದ್ದಲ್ಲಿ ಚಾಮುಂಡಿ ಬೆಟ್ಟಕ್ಕೆ ನುಗ್ಗುವುದಾಗಿ ಎಚ್ಚರಿಕೆ
ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆ ಪುಷ್ಪಾರ್ಚನೆಗೆ ಅವಕಾಶ ಕಲ್ಪಿಸಬೇಕು ಇಲ್ಲದಿದ್ದರೆ ನಾವೇ ಚಾಮುಂಡಿ ಬೆಟ್ಟಕ್ಕೆ ನುಗ್ಗುವುದಾಗಿ ದಲಿತರು ಜಿಲ್ಲಾಡಳಿತಕ್ಕೆ ಎಚ್ಚರ ನೀಡಿದ್ದಾರೆ.
ಪುರಭವನದ ಆವರಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಚಾಮುಂಡಿ ಬೆಟ್ಟದ ಮಹಿಷನ ಬಳಿಗೆ ನಿಷೇದಾಜ್ಞೆ ಹಾಕಿರುವುದನ್ನು ಒಕ್ಕೊರಲಿನಿಂದ ಖಂಡಿಸಲಾಯಿತು.
ಈ ವೇಳೆ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ ಜಿಲ್ಲಾಡಳಿತ ಕಾರ್ಯಕ್ರಮ ಮುಗಿದ ನಂತರ ಸಮಿತಿಯ 5 ಜನರನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿಸಿದರೆ ಸರಿ ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಕಾರಣ ಎಂಬ ಎಚ್ಚರಿಕೆ ನೀಡಿದರು.
ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಎಸಿಪಿ ಶಾಂತಮಲ್ಲಪ್ಪ ಅವರು ಸಮಿತಿಯವರೊಂದಿಗೆ ಮಾತನಾಡಿ, ಮಹಿಷನ ಪ್ರತಿಮೆಗೆ ಬಣ್ಣ ಹೊಡೆಯಲಾಗಿದ್ದು ಅದಕ್ಕಾಗಿ ಮುಚ್ಚಲಾಗಿದೆ. ಹಾಗಾಗಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಂತೆಯೇ ಮಹಿಷ ಭಕ್ತರು ಧಿಕ್ಕಾರ ಕೂಗಿದರು. ನೀವು ಅವಕಾಶ ಕೊಡದಿದ್ದರೆ ನಾವೇ ಹೋಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗೊಂದಲ ಉಂಟಾಗುವುದನ್ನು ಅರಿತ ಎಸಿಪಿ ಕಮೀಷನರ್ ಬರುತ್ತಾರೆ ಎಂದು ಅಲ್ಲಿಂದ ಹೊರ ನಡೆದರು.