ಮೈಸೂರು: ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಸಾವು
ಮೈಸೂರು: ಮನೆಯಲ್ಲಿ ಮಲಗಿದ್ದ ವೇಳೆ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಮೈಸೂರು ನಗರದ ಯರಗನಹಳ್ಳಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಕುಮಾರ್ (45) ಇವರ ಪತ್ನಿ ಮಂಜುಳಾ(39), ಇಬ್ಬರು ಪುತ್ರಿಯರಾದ ಅರ್ಚನಾ(19), ಸ್ವಾತಿ(17) ಎಂದು ಗುರುತಿಸಲಾಗಿದೆ.
ಮೃತ ಕುಮಾರ್ ಯರಗನಹಳ್ಳಿ ವೃತ್ತದ ಟೆರಿಷಿಯನ್ ಕಾಲೇಜು ಪಕ್ಕದಲ್ಲಿ ಬಟ್ಟೆ ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಅನಿಲ ಬಳಸಿ ಇಸ್ತ್ರಿ ಮಾಡುತ್ತಿದ್ದ ಕುಮಾರ್, ಅಂಗಡಿ ರಜೆ ಮಾಡಿದ್ದರಿಂದ ಮನೆಯಲ್ಲಿ ಎರಡು ಖಾಲಿ ಸಿಲಿಂಡರ್, ಒಂದು ಭರ್ತಿ ಸಿಲಿಂಡರ್ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಈ ಕುಟುಂಬ ಅವರ ಸಂಬಂಧಿಕರ ಮದುವೆಗೆ ಎಂದು ರವಿವಾರ ಚಿಕ್ಕಮಗಳೂರಿಗೆ ತೆರಳಿದ್ದರು. ಸೋಮವಾರ ರಾತ್ರಿ ಮೈಸೂರಿಗೆ ಆಗಮಿಸಿದ ಅವರು ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದ್ದಾರೆ. ಸೋಮವಾರ ನಿರಂತರವಾಗಿ ಜೋರು ಮಳೆ ಸುರಿಯುತ್ತಿದ್ದರಿಂದ ಮನೆಯ ಕಿಟಕಿ ಬಾಗಿಲನ್ನು ಮುಚ್ಚಿ ಮಲಗಿದ್ದಾರೆ. ಈ ವೇಳೆ ಭರ್ತಿ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗಿ ಗಾಢ ನಿದ್ರೆಯಲ್ಲಿ ಜಾರಿದ್ದ ಇವರ ದೇಹ ಆವರಿಸಿದೆ. ಇವರುಗಳಿಗೆ ಉಸಿರಾಡಲು ಕಷ್ಟವಾಗಿ ಮನೆಯಿಂದ ಹೊರಬರಲು ಆಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬ:
ಸಣ್ಣ ಮನೆಯಲ್ಲಿ ಈ ಕುಟುಂಬ ವಾಸ ಮಾಡುತ್ತಿತ್ತು. ಕುಮಾರ್ ಮತ್ತು ಪತ್ನಿ ಮಂಜುಳಾ ರೂಮ್ ನಲ್ಲಿ ಮಲಗಿದ್ದರೆ. ಇಬ್ಬರು ಹೆಣ್ಣು ಮಕ್ಕಳು ಹಾಲ್ ನಲ್ಲಿ ಮಲಗಿದ್ದರು. ಅನಿಲ ಸೋರಿಕೆಯಿಂದ ಒಬ್ಬ ಮಗಳಿಗೆ ಎಚ್ಚರವಾಗಿ ಬಾಗಿಲ ಬಳಿಗೆ ಬಂದು ಬೀಗ ತೆಗೆಯಲು ಯತ್ನಿಸಿ ತೆಗೆಯಲು ಆಗದೆ ಬಾಗಿಲ ಬಳಿಯೇ ಮೃತಪಟ್ಟಿದ್ದಾಳೆ.