ನಂಜನಗೂಡು: ಕಪಿಲಾ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳ ಸಾವು
ಸಾಂದರ್ಭಿಕ ಚಿತ್ರ
ಮೈಸೂರು: ನಂಜನಗೂಡು ನಗರದ ಕಪಿಲ ನದಿಯ ಹೆಜ್ಜಿಗೆ ಸೇತುವೆ ಬಳಿ ಶುಕ್ರವಾರ ಬೆಳಗ್ಗೆ ಸ್ನಾನ ಮಾಡಲು ನದಿಗೆ ಇಳಿದ ಐವರು ಅಯ್ಯಪ್ಪ ಮಾಲಾ ಧಾರಿಗಳ ಪೈಕಿ ಮೂವರು ನೀರು ಪಾಲಾಗಿ ಇಬ್ಬರು ಬದುಕುಳಿದಿರುವ ಘಟನೆ ನಡೆದಿದೆ.
ತುಮಕೂರು ಮೂಲದ ಗವಿರಂಗ (19) ರಾಕೇಶ್ (19) ಹಾಗೂ ಅಪ್ಪು (16) ಮೃತ ಅಯ್ಯಪ್ಪ ಮಾಲಾ ದಾರಿಗಳು ಎನ್ನಲಾಗಿದೆ.
ಅಯ್ಯಪ್ಪನ ದರ್ಶನ ಮುಗಿಸಿಕೊಂಡು ತಡರಾತ್ರಿ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆಯವ ಸಲುವಾಗಿ ಇಲ್ಲಿಗೆ ಆಗಮಿಸಿದ ಅಯ್ಯಪ್ಪ ಭಕ್ತರು ಕಪಿಲಾ ನದಿಯ ಹೆಜ್ಜಿಗೆ ಸೇತುವೆ ಬಳಿ ಸ್ನಾನ ಮಾಡಿ ಅಯ್ಯಪ್ಪನ ದರ್ಶನ ಪಡೆಯಲು 5 ಜನ ಮಾಲಾದಾರಿಗಳು ನದಿಗೆ ಇಳಿದಿದ್ದಾರೆ. ಈ ವೇಳೆ ಸುಳಿಗೆ ಸಿಲುಕಿದ ಪರಿಣಾಮ ಮೂವರು ಮೇಲೇಳಲಾಗದೆ ಮೃತಪಟ್ಟರೆ ಇಬ್ಬರು ಮಾಲಾದಾರಿಗಳು ಬದುಕುಳಿದಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ತಕ್ಷಣ ನಂಜನಗೂಡು ನಗರದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಮೃತಪಟ್ಟ ಒಬ್ಬ ಮಾಲಧಾರಿಯ ಮೃತದೇಹವನ್ನು ಹೊರ ತೆಗೆದರು. ನಂಜನಗೂಡು ತಾಲ್ಲೂಕು ಕಚೇರಿಯಲ್ಲಿ ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಸುತ್ತಿದ್ದ ಶಾಸಕ ದರ್ಶನ್ ಧ್ರುವನಾರಾಯಣ ಅವರು ವಿಷಯ ತಿಳಿದ ತಕ್ಷಣ ಸಭೆಯನ್ನು ಅರ್ಧಕ್ಕೆ ಮೊಟಕು ಗೊಳಿಸಿ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಬಳಿಕ ಸ್ಥಳದಲ್ಲೇ ನಿಂತು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಮತ್ತು ಪೊಲೀಸರಿಗೆ ಸಾವನಪ್ಪಿರುವ ಮೂವರ ಮೃತದೇಹವನ್ನು ತಕ್ಷಣ ಹೊರ ತೆಗೆಸಿ ಆದಷ್ಟು ಬೇಗ ಮೃತ ದೇಹಗಳನ್ನು ಅವರ ಸ್ವಗ್ರಾಮಕ್ಕೆ ರವಾನಿಸುವಂತೆ ಅಧಿಕಾರಿಗಳಿಗೆ ತಾಕಿತು ಮಾಡಿದರು.