ಈ ದೇಶಕಂಡ ಅತ್ಯಂತ ದುರ್ಬಲ ಪ್ರಧಾನಿ ನರೇಂದ್ರ ಮೋದಿ: ವಿ.ಎಸ್. ಉಗ್ರಪ್ಪ ವಾಗ್ದಾಳಿ

ಮೈಸೂರು: ಈ ದೇಶಕಂಡ ಅತ್ಯಂತ ದುರ್ಬಲ ಪ್ರಧಾನಿ ಯಾರಾದರು ಇದ್ದರೆ ಅದು ನರೇಂದ್ರ ಮೋದಿ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನವಿರೋಧಿ, ಸಮಾಜವನ್ನು ಒಡೆದು ಆಳುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೈಗೂಡಿಸಿಕೊಂಡಿದ್ದಾರೆ. ಕಳೆದ 11 ವರ್ಷಗಳಿಂದ ದೇಶದಲ್ಲಿ 185 ಲಕ್ಷ ಕೋಟಿ ರೂ. ಅಷ್ಟು ಸಾಲ ಮಾಡಿರುವ ಹೆಗ್ಗಳಿಕೆ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ ಎಂದರು.
ನಮ್ಮ ರಾಜ್ಯದಲ್ಲಿ ಕಟ್ಟಿರುವ ಕೆ. ಆರ್ ಎಸ್, ತುಂಗಭದ್ರಾ, ನಾರಾಯಣಪುರ ಅಣೆಕಟ್ಟೆಯಂತಹದನ್ನೇದಾರು ಕಟ್ಟಿದ್ದೀರಾ?, ಎಚ್.ಎ.ಎಲ್ ಅಂತ ಕೈಗಾರಿಕಾ ಸಂಸ್ಥೆಯನ್ನೇನಾದರು ಮಾಡಿದ್ದೀರ? ಇಷ್ಟೊಂದು ಸಾಲವನ್ನು ಯಾವುದಕ್ಕಾಗಿ ಮಾಡಿದ್ದೀರಾ ಎಂದು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಸಮಾಜದ ನಡುವೇ ಧರ್ಮ. ಜಾತಿ, ಭಾಷೆ ಎಂಬ ಕಂದಕ ಸೃಷ್ಟಿ ಮಾಡಿದ್ದೀರಿ. ಜನರ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಅವರ ಬದುಕಿನ ಮೇಲೆ ಚಪ್ಪಡಿಕಲ್ಲು ಎಳೆಯುವ ಕೆಲಸ ಮಾಡುತ್ತಿದ್ದೀರಿ. ಇದೇ ನಿಮ್ಮ ಹತ್ತು ವರ್ಷಗಳ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಬೆಲೆ ಏರಿಕೆಯನ್ನು ಮುಚ್ಚಿಕೊಳ್ಳುವುದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಅವರು ಜನಕ್ರೋಶ ಯಾತ್ರೆ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರ ಆಕ್ರೋಶ ಸಿಎಂ ಸಿದ್ದರಾಮಯ್ಯ, ಡಿಸಿಎಂ. ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರದ ಮೇಲೆ ಇಲ್ಲ. ಮೋದಿ ನೇತೃತ್ವದ ಕೇಂದ್ರ ಎನ್‌ಡಿಎ ಸರಕಾರದ ಮೇಲೆ ಜನಾಕ್ರೋಶ ಇರುವುದು ಎಂದು ಹರಿಹಾಯ್ದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,ಪತ್ರಿಪಕ್ಷನಾಯಕ ಆರ್, ಅಶೋಕ, ಚಲವಾದಿ ನಾರಾಯಣಸ್ವಾಮಿ, ಅವರೆ ಈ ರಾಜ್ಯದಲ್ಲಿ ಬೆಲೆ ಏರಿಕೆಗೆ ಕೇಂದ್ರ ಸರಕಾರ ಕಾರಣವೋ ಅಥವಾ ರಾಜ್ಯ ಕಾಂಗ್ರೆಸ್ ಸರಕಾರ ಕಾರಣವೋ ಎಂಬ ಬಗ್ಗೆ ಸಾರ್ವಜನಿಕ ಚರ್ಚೆ ಮಾಡೋಣ. ನಿಮಗೆ ದಮ್ಮು ತಾಕತ್ತು ಇದ್ದರೆ ಬನ್ನಿ ಎಂದು ವಿ.ಎಸ್.ಉಗ್ರಪ್ಪ ಸವಾಲು ಹಾಕಿದರು.
ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರಕಾರ ಬೆಲೆ ಏರಿಕೆಯನ್ನು ಸಂಸತ್ತಿನಲ್ಲಿ ಏಕೆ ಪ್ರಶ್ನೆ ಮಾಡಲ್ಲ. ರಾಜ್ಯದಲ್ಲಿ ಜನಕ್ರೋಶ ಯಾತ್ರೆ ಮಾಡುತ್ತಾ ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಅಂಬಾನಿ. ಅದಾನಿ ಅವರ 16 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರ ಸಾಲ ಏಕೆ ಮನ್ನಾ ಮಾಡುವುದಿಲ್ಲ. ನಮ್ಮ ಕಾಂಗ್ರೆಸ್ ಸರಕಾರದ 5 ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಾಲಿನ ದರ ಏರಿಕೆ ಮಾಡಿ ಆ ಹಣವನ್ನು ನೇರವಾಗಿ ರೈತರಿಗೆ ನೀಡುವ ಮೂಲಕ ರೈತರ ಪರವಾಗಿ ನಿಂತಿದ್ದೇವೆ ಎಂದರು.
ಸಾಮಾಜಿಕ ನ್ಯಾಯದ ವಿಚಾರ ಬಂದಾಗ ಕೆಲವು ಶಕ್ತಿಗಳು, ಸಂಘಟನೆ ವಿರೋಧ ಮಾಡುತ್ತಲೇ ಬಂದಿವೆ. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿಯುತ್ತಾರೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.
ಹಿಂದುಳಿದ ವರ್ಗಗಳ ಕಮಿಷನ್ ಪ್ರಕಾರ ಸೆಕ್ಷನ್ 9 ಸಬ್ ಕ್ಲಾಸ್ 2ರ ಪ್ರಕಾರ ಜಾತಿಗಣತಿ ನಡೆಸುವಂತಿಲ್ಲ. ಯಾರನ್ನು ಸೇರಿಸಬೇಕು ಯಾರನ್ನು ತೆಗೆಯಬೇಕು ಎಂದು ಒಂದು ಸಮೀಕ್ಷೆ ಮಾತ್ರ ಮಾಡಿದ್ದಾರೆ. ಇದೊಂದು ಸಮೀಕ್ಷೆಯೇ ಹೊರತು ಜಾತಿ ಜನಗಣತಿ ಅಲ್ಲ. ಅವಶ್ಯಕತೆ ಬಿದ್ದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ದೃಷ್ಟಿಯಿಂದ ಜಾತಿಗಣತಿಯ ಅವಶ್ಯಕತೆ ಇದೆ. ನಾನೇ ಇದುವರೆಗೂ ಸಂಪೂರ್ಣವಾಗಿ ಜಾತಿಗಣತಿ ವರದಿಯನ್ನು ಓದಿಲ್ಲ. ಮೊದಲು ಈ ವಿಚಾರಕ್ಕೆ ಕೈ ಹಾಕಿದವರು ಸಿದ್ದರಾಮಯ್ಯ ಅವರು, ಬಳಿಕ ಬಿಹಾರದಲ್ಲಿ ಶುರು ಮಾಡಿದರು. ದೇಶವಾರು ಜಾತಿಗಣತಿ ಆಗಬೇಕು ಎಂಬ ಒತ್ತಾಯ ಕೂಡ ಇದೆ. ಇದು ವೈಜ್ಞಾನಿಕವಾಗಿ ಚರ್ಚೆ ನಡೆಯುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎನ್ ನಂಜುಂಡಾಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ, ಬಿ.ಜೆ ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡರುಗಳಾಸ ಶಿವಣ್ಣ, ಈಶ್ವರ್ ಚಕ್ಕಡಿ ಮಾಧ್ಯಮ ವಕ್ತಾರ ಕೆ.ಮಹೇಶ್ ಉಪಸ್ಥಿತರಿದ್ದರು.