ಪ್ರಧಾನಿ ಮೋದಿ ಅವರ ರೈತ ವಿರೋಧಿ ನೀತಿ ಖಂಡಿಸಿ ಫೆ.16 ರಂದು ದೇಶಾದ್ಯಂತ ʻಗ್ರಾಮೀಣ ಬಂದ್ʻ: ಬಡಗಲಪುರ ನಾಗೇಂದ್ರ
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ರೈತ ವಿರೋಧೀ ನೀತಿ ಖಂಡಿಸಿ ಇದೇ ಫೆ. 16 ರಂದು ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶಾದ್ಯಂತ ʻಗ್ರಾಮೀಣ ಬಂದ್ʻ ಗೆ ಕರೆ ನೀಡಲಾಗಿದೆ. ಇದರಲ್ಲಿ ರೈತಪರ, ದಲಿತ, ಪ್ರಗತಿಪರ ಹಾಗೂ ಕಾರ್ಮಿಕ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʻತಾವು ರೈತ ವಿರೋಧಿ ಎನ್ನುವುದನ್ನು ದಿಲ್ಲಿಯಲ್ಲಿನ ರೈತ ಹೋರಾಟದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ರೈತನ್ನು ದಿಕ್ಕು ತಪ್ಪಿಸಿ ಹೋರಾಟ ಅಸ್ಥಿರಗೊಳಿಸುವ ಹುನ್ನಾರದ ಮೂಲಕ ಪ್ರಧಾನಿ ಮತ್ತೆ ಸಾಬೀತು ಪಡಿಸಿದ್ದಾರೆʻ.
ಈ ಹಿಂದೆ ನಡೆದ ಪ್ರತಿಭಟನೆ, ರೈತ ಹೋರಾಟದ ವೇಳೆ ಇಡೀ ವಿಶ್ವವೇ ಪ್ರಧಾನಿ ನಡೆಯನ್ನು ಖಂಡಿಸಿತ್ತು. ಹೀಗಾಗಿ ಮಣಿದ ಅವರು ಕೆಲವೊಂದು ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸದಿರುವ ಹಿನ್ನೆಲೆಯಲ್ಲಿ ರೈತರು ಮತ್ತೊಮ್ಮೆ ಹೋರಾಟ ಮಾಡಲು ದಿಲ್ಲಿಗೆ ತೆರಳುತ್ತಿದ್ದಾರೆ. ಆದರೆ ಇವರು ದಿಲ್ಲಿ ತಲುಪದಂತೆ ನೋಡಿಕೊಳ್ಳಲು ಪ್ರಧಾನಿ ಎಲ್ಲ ರೀತಿಯ ಹುನ್ನಾರ ನಡೆಸಿದ್ದಾರೆ ಎಂದರು.
ನ್ಯಾಯ ಕೇಳಿ ದಿಲ್ಲಿಗೆ ಬರುತ್ತಿರುವ ರೈತರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಈ ರೀತಿ ಪ್ರತಿಭಟಿಸುವ ಹಕ್ಕನ್ನು ದಮನ ಮಾಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು, ಪ್ರಸನ್ನ ಎನ್. ಗೌಡ, ಪಿ. ಮರಂಕಯ್ಯ, ನಾಗನಹಳ್ಳಿ ವಿಜೇಂದ್ರ, ಮಂಡಕಳ್ಳಿ ಮಹೇಶ್ ಇದ್ದರು.