ಬಾಲಕಿಯ ದೂರು ಸ್ವೀಕರಿಸುವಲ್ಲಿ ನಿರ್ಲಕ್ಷ್ಯ: ಕೆ.ಆರ್.ನಗರ ಠಾಣೆಯ ಇನ್ ಸ್ಪೆಕ್ಟರ್, ಎಎಸ್ಸೈ ಸಹಿತ ಮೂವರ ಅಮಾನತು
ಮೈಸೂರು: ಕೆ.ಆರ್.ನಗರ ತಾಲೂಕಿನ ಗ್ರಾಮವೊಂದರ ಬಾಲಕಿಯ ಪೋಷಕರು ನೀಡಿದ ದೂರು ದಾಖಲಿಸಿಕೊಳ್ಳದೇ ಒಂದೇ ಕುಟುಂದ ನಾಲ್ವರು ವಿಷ ಸೇವಿಸಿ, ಒಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ನಗರ ಠಾಣೆಯ ಇನ್‌ಸ್ಪೆಕ್ಟರ್ ಪಿ.ಪಿ.ಸಂತೋಷ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗಿರೀಶ್, ಮುಖ್ಯಪೇದೆ ರಾಘವೇಂದ್ರ ಅವರನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಅಮಾನತು ಮಾಡಿದ್ದಾರೆ.
ಬ್ಲ್ಯಾಕ್ ಮೇಲ್ ಪ್ರಕರಣ ಸಂಬಂಧ ಚೀರನಹಳ್ಳಿಯ ಲೋಕೇಶ್ ಎಂಬಾತನ ವಿರುದ್ಧ ಸಂತ್ರಸ್ತ ಬಾಲಕಿ ನೀಡಿದ ದೂರನ್ನು ದಾಖಲು ಮಾಡಲು ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೆ.ಆರ್.ನಗರ ತಾಲೂಕಿನ ಗ್ರಾಮವೊಂದರ ಲೋಕೇಶ್ ಎಂಬಾತ ಪಕ್ಕದ ಗ್ರಾಮದ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯ ಖಾಸಗಿ ಫೋಟೊ ಹಾಗೂ ವೀಡಿಯೊ ಮಾಡಿ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸಂಬಂಧ ಸಂತ್ರಸ್ತೆಯ ಪೋಷಕರು ಕೆ.ಆರ್. ನಗರ ಠಾಣೆಗೆ ದೂರು ನೀಡಿಯೂ ತಮಗೆ ನ್ಯಾಯ ಸಿಗುವ ಭರವಸೆ ಇಲ್ಲದೇ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಬರುವಾಗ ತಾಳಬೆಟ್ಟದಲ್ಲಿ ಸಂತ್ರಸ್ತ ಬಾಲಕಿ, ಆಕೆಯ ತಾಯಿ, ತಾತ, ಅಜ್ಜಿ ವಿಷ ಸೇವಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿತ್ತು.
ಘಟನೆಯಲ್ಲಿ 65 ವರ್ಷದ ತಾತ ಮೃತಪಟ್ಟಿದ್ದರು. ಇವರ ಸಾವಿಗೆ ಕೆ.ಆರ್.ನಗರ ಠಾಣೆ ಪೊಲೀಸರೇ ಕಾರಣ ಎಂದು ವಾಲ್ಮೀಕಿ ಸಮುದಾಯದ ಹಲವಾರು ಮುಖಂಡರು, ರಾಜಕಾರಣಿಗಳು ಪೊಲೀಸ್ ಠಾಣೆ ಎದುರು ಮೃತದೇಹವಿಟ್ಟು ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಾ.ರಾ.ಮಹೇಶ್ ಕೂಡ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು.
ಸಂತ್ರಸ್ತೆಯ ತಾಯಿ ಸ್ಥಿತಿ ಗಂಭೀರ
ಚಾಮರಾಜನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯಲ್ಲಿ ಸಂತ್ರಸ್ತೆ, ಆಕೆಯ ತಾಯಿ ಹಾಗೂ ಅಜ್ಜಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 45 ವರ್ಷ ವಯಸ್ಸಿನ ಸಂತ್ರಸ್ತೆಯ ತಾಯಿ ಸ್ಥಿತಿ ಗಂಭೀರವಾಗಿದೆ. ಇನ್ನಿಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯ ವಿರುದ್ಧ ಪೊಕ್ಸೊ ದಾಖಲು
ಬಾಲಕಿಯ ವೀಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿದ್ದ ಚೀರನಹಳ್ಳಿಯ ಲೋಕೇಶ್ ಎಂಬಾತನ ವಿರುದ್ಧ ಪೊಕ್ಸೊ ಹಾಗೂ ಎಸ್‌ಸಿ -ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.