ಸಂಸದ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆ ನೀಡದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‍ಗೆ ಕೋರ್ಟ್ ನೋಟಿಸ್
ಮೈಸೂರು : ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಯಾವುದೇ ರೀತಿ ಹೇಳಿಕೆ ಮತ್ತು ಪತ್ರಿಕಾಗೋಷ್ಠಿ ನಡೆಸದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ವಾಗ್ದಾಳಿ ನಡೆಸುತ್ತಿದ್ದರು. ಇದರಿಂದ ಸಂಸದ ಪ್ರತಾಪ್ ಸಿಂಹ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಇದಕ್ಕೆ ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜೊತೆಗೆ ಫೆ.13 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಸಮನ್ಸ್ ನೀಡಿದೆ.
ಪತ್ರಿಕೆ ಹಾಗೂ ಯಾವುದೇ ಟಿವಿ ಮಾಧ್ಯಮಕ್ಕೆ ಹೇಳಿಕೆ ನೀಡುವಂತಿಲ್ಲ. ಸ್ಥಳೀಯ ಕೇಬಲ್ ಚಾನೆಲ್, ರೆಡಿಯೋ, ಸಾಮಾಜಿಕ ಮಾಧ್ಯಮ ಯಾವುದರಲ್ಲೂ ಯಾವುದೇ ಸ್ವರೂಪದ ಹೇಳಿಕೆ ನೀಡುವಂತಿಲ್ಲ ಎಂದು ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆಯನ್ನು ಲಕ್ಷ್ಮಣ್ ಉಲ್ಲಂಘಿಸಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ತನ್ನ ಆದೇಶದಲ್ಲಿ ಹೇಳಿದೆ.