ಮುಂದಿನ ವರ್ಷ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೈವೆ ಕಾಮಗಾರಿ ಆರಂಭ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಮೈಸೂರಿನಲ್ಲಿ 4 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ
ಮೈಸೂರು: ರಾಜ್ಯ ಸರಕಾರ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ, ಉದ್ದೇಶಿತ ಮೈಸೂರು ಫೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಮತ್ತು ಚಾಮುಂಡಿಬೆಟ್ಟದಲ್ಲಿ ರೋಪ್ವೇ ನಿರ್ಮಾಣ ಮಾಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರವಿವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ 4 ಸಾವಿರ ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು-ನಂಜನಗೂಡು ಆರು ಪಥದ ರಸ್ತೆ ಮತ್ತು ಕುಶಾಲನಗರ-ಮಾಣಿ ನಡುವಿನ 103 ಕಿಮೀ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಕೆ ಆದೇಶ ನೀಡುತ್ತೇವೆ. ಮೈಸೂರು-ಕುಶಾಲನಗರ ಚತ್ಪುಷಥ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದ್ದು, ಕಾಮಗಾರಿ ಆರಂಭದ ಪೂರ್ವ ಕೆಲಸಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.
ಮುಂದಿನ ವರ್ಷದ ಜನವರಿ ಆರಂಭದಲ್ಲಿ ಬೆಂಗಳೂರು - ಚೆನೈ ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಆರಂಭವಾಗಲಿದೆ. ಮೈಸೂರು - ಹಾಸನಕ್ಕೆ ರಿಂಗ್ ರಸ್ತೆ, ಕುಶಾಲನಗರ - ಮಾಣಿ ರಸ್ತೆಗೆ ಡಿಪಿಆರ್, ಮೈಸೂರು - ನಂಜನಗೂಡು ಆರು ಪಥದ ರಸ್ತೆ ನಿರ್ಮಾಣ, ಮಂಗಳೂರಿನ ವಿಕಾಸನಕ್ಕೆ ಗ್ರೀನ್ ಎಕ್ಸ್ ಪ್ರೆಸ್ ನಿರ್ಮಾಣ ಮಾಡುವುದಾಗಿ ತಿಳಿಸಿದರು.