ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ನಾಮಪತ್ರ ಸಲ್ಲಿಕೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿ
ಮೈಸೂರು : ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಮಂಗಳವಾರ ನಾಮಪತ್ರ ಸಲ್ಲಿಸಿದರು.
ನಗರದ ಹುಣಸೂರು ರಸ್ತೆಯ ಕಲಾಮಂದಿರದ ಎದುರಿಗಿರುವ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿದ ಅವರು ಐದನೇ ಬಾರಿಗೆ ಚುನಾವಣೆಗೆ ನಿಲ್ಲುವ ಮೂಲಕ ಪ್ರಾದೆಶಿಕ ಆಯುಕ್ತ ಡಾ.ಪ್ರಕಾಶ್ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರುಗಳಾದ ಡಾ.ಎಚ್.ಸಿ.ಮಹದೇವಪ್ಪ, ಚಲುವರಾಯಸ್ವಾಮಿ, ಮಧು ಬಂಗಾರಪ್ಪ ಜೊತೆಗಿದ್ದರು.
ಬಿಜೆಪಿ-ಜೆಡಿಎಸ್ ಒಮ್ಮತದ ಅಭ್ಯರ್ಥಿ ಘೋಷಣೆ ಮಾಡಲಿ:
ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮರಿತಿಬ್ಬೇಗೌಡ, ಬಿಜೆಪಿ ಜೆಡಿಎಸ್ ನಲ್ಲಿ ಯಾರು ಅಭ್ಯರ್ಥಿ ಅನ್ನೋದೇ ಗೊಂದಲವಿದೆ. ಮೊದಲು ಅವರು ಒಮ್ಮತ ಅಭ್ಯರ್ಥಿಯನ್ನ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.
ನನ್ನನ್ನು ನಾಲ್ಕು ಜಿಲ್ಲೆಯ ಶಿಕ್ಷಕರು ಸೇರಿ ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ನಾನು ಮೊದಲ ಬಾರಿಗೆ ಕಾಂಗ್ರೆಸ್, ಎರಡನೇ ಬಾರಿ ಪಕ್ಷೇತರ, ಮೂರು ಮತ್ತು ನಾಲ್ಕನೇ ಬಾರಿ ಜೆಡಿಎಸ್ ನಿಂದ ಆಯ್ಕೆಗೊಂಡಿದ್ದೆ. ಈಗ ಐದನೆ ಬಾರಿಗೆ ಮತ್ತೆ ನನ್ನ ತವರು ಪಕ್ಷ ಕಾಂಗ್ರೆಸ್ ಗೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಶಿಕ್ಷಕರ ಪಾವಿತ್ರ್ಯತೆ ಕಾಪಾಡಿಕೊಂಡು ಬಂದಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಶಿಕ್ಷಕರ ಭಾವನೆಗೆ ಧಕ್ಕೆ ತರದೇ ಕೆಲಸ ಮಾಡಿದ್ದೇನೆ ಎಂದು ಹೇಳಿದರು.