ಮೈಸೂರು | ಗೊಂದಲ, ಬಂಡಾಯದ ನಡುವೆ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದ ನಾಮಪತ್ರ ಸಲ್ಲಿಕೆ
ಮೈಸೂರು: ಗೊಂದಲ ಬಂಡಾಯದ ಭೀತಿಯ ನಡುವೆಯೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನ ವಿವೇಕಾನಂದ ವಿಧಾನಪರಿಷತ್ ನ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಗುರುವಾರ ನಾಮಪತ್ರ ಸಲ್ಲಿಸಿದರು.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿದ ಅವರು, ಚುನಾವಣಾಧಿಕಾರಿ ಡಾ.ಪ್ರಕಾಶ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಈ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ವಿರೋಧ ಪಕ್ಷದ ನಾಯಕ ಆರ್.ಆಶೋಕ್, ಬಿಎಸ್ ವೈ ಪುತ್ರ ಬಿ.ವೈ.ರಾಘವೇಂದ್ರ, ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಶಾಸಕರಾದ ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ಸೇರಿ ಅನೇಕರು ಉಪಸ್ಥಿತರಿದ್ದರು.
ಇ.ಸಿ.ನಿಂಗರಾಜೇಗೌಡ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು. ಆದರೆ ಬದಲಾದ ರಾಜಕೀಯದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಆದರೆ ಇ.ಸಿ.ನಿಂಗರಾಜೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ನಲ್ಲೂ ಬಂಡಾಯದ ಬಿಸಿ ತಟ್ಟಿದ್ದು, ಮಾಜಿ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಹ ಇಂದು ಪಕ್ಷೇತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ ಜೆಡಿಎಸ್ ಮುಖಂಡರುಗಳು ಅವರನ್ನು ಹೈಜಾಕ್ ಮಾಡಿ ಸ್ಫರ್ಧೆ ಮಾಡುವುದನ್ನು ತಪ್ಪಿಸಿದ್ದಾರೆ. ಒಟ್ಟಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದಲ್ಲಿ ಬಂಡಾಯ ಏರ್ಪಟ್ಟಿದ್ದು, ಮೈತ್ರಿ ಪಕ್ಷದ ನಾಯಕರುಗಳು ಯಾವ ರೀತಿ ಬಂಡಾಯ ಶಮನಗೊಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.